ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Sunday, January 22, 2006

ಮಜಾವಾಣಿ ವಿಶೇಷ ಅಂಕಣಆತ ಮಂಗಗಳ ಗ್ರಹದಿಂದ, ಈತನೂ.. ಮಂಗಗಳ ಗ್ರಹದಿಂದ

ಪ್ರಿಯ ಓದುಗರೇ, ಗಂಡ ಹೆಂಡಿರ ನಡುವಿನ ದೈನಂದಿನ ಸಮಸ್ಯೆಗಳ ಬಗ್ಗೆ ಅಮೆರಿಕದ ಜಾನ್ ಗ್ರೇ ಅವರು ಬರೆದಿರುವ ಪುಸ್ತಕ ಈಗ ಕನ್ನಡವನ್ನೂ ತಲುಪಿ ನಮ್ಮ ಪ್ರತಿಸ್ಪರ್ಧಿಯಾದ ದಟ್ಸ್ ಕನ್ನಡ ಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವುದು ನಿಮಗೆಲ್ಲರಿಗೂ ತಿಳಿದಿರಬಹುದು. ನಮ್ಮ ದೃಷ್ಟಿಯಲ್ಲಿ, "ಗಂಡ ಹೆಂಡಿರ ಜಗಳ ಉಂಡು ಮಲಗುವವರೆಗೆ" ಮಾತ್ರ. ಇಬ್ಬರೂ ಮಲಗಿದ ಮೇಲಂತೂ, ಜಗಳಕ್ಕೆ ಪೂರ್ಣ ವಿರಾಮ - ಎದ್ದ ನಂತರ ಜಗಳ ಮತ್ತೆ ಮುಂದುವರೆಸುವವರೆಗೆ. ನಮ್ಮ ದೃಷ್ಟಿಯಲ್ಲಿ ಇಂತಹ ಕ್ಷುಲ್ಲಕ ವಿಚಾರಕ್ಕೆ ಪುಸ್ತಕ ಬರೆಯುವ ಅಥವಾ ಓದುವ ಅವಶ್ಯಕತೆ ಇಲ್ಲ.

ಆದರೆ, ಗಂಡು - ಗಂಡುಗಳ ನಡುವಿನ ಸಂಬಂಧ ಹಳಸಿದರೆ, ಗಂಡಾಂತರ ಕಾದಿದೆ ಎಂದೇ ಅರ್ಥ. ಉದಾಹರಣೆಗೆ ಅಮೆರಿಕದ ಅಧ್ಯಕ್ಷ ಬುಶ್ ಮತ್ತು ಇರಾಕಿನ ಮಾಜಿ ಸರ್ವಾಧಿಕಾರಿ ಸದ್ದಾಮ್ ಹುಸೇನರ ನಡುವಿನ ಜಗಳ ಇಬ್ಬರೂ ಹಲವಾರು ಬಾರಿ ಉಂಡು ಮಲಗಿದ್ದರೂ, ಮುಕ್ತಾಯವಾಗುವ ಯಾವುದೇ ಚಿಹ್ನೆಗಳು ಕಾಣುತ್ತಿಲ್ಲ. ಜೊತೆಗೇ ಈ ಗಂಡು-ಗಂಡುಗಳ ಜಗಳದ ಮಧ್ಯೆ ಹ್ಯಾಲಿಬರ್ಟನ್ ಶ್ರೀಮಂತವಾಯ್ತು ಎನ್ನುವಂತೆ, ಇಂಥಹ ಜಗಳಗಳು ಜಾಗತಿಕ ವ್ಯವಹಾರದ ಮೇಲೆ ಪರಿಣಾಮ ಬೀರುತ್ತವೆ.

ಇಡೀ ಜಗತ್ತಿನ ಅಳಿವಿಗೇ ಮುಖ್ಯವಾದ ಗಂಡು-ಗಂಡುಗಳ ನಡುವಿನ ಸಂಬಂಧಗಳ ಮೇಲೆ ಬೆಳಕು ಚೆಲ್ಲುವ ಚಾರ್ಲ್‌ಟನ್ ಹೆಸ್ಟನ್ ರವರ "ಆತ ಮಂಗಗಳ ಗ್ರಹದಿಂದ, ಈತನೂ.. ಮಂಗಗಳ ಗ್ರಹದಿಂದ" ಪುಸ್ತಕದ ಕನ್ನಡ ಅನುವಾದವನ್ನು ಪ್ರಕಟಿಸಲು ನಮ್ಮ ಪತ್ರಿಕೆ ನಿರ್ಧರಿಸಿದೆ.

ಎಲ್ಲರಿಗೂ ತಿಳಿದಂತೆ ಗಂಡಸರು ಮಂಗಳ ಗ್ರಹದಿಂದ ಬಂದರೆನ್ನುವುದು, ಹೆಂಗಸರು ಶುಕ್ರ ಗ್ರಹದಿಂದ ಬಂದರೆನ್ನುವುದೂ "ಡಾ." ಜಾನ್ ಗ್ರೇ ಪಡೆದಿರುವ ಡಾಕ್ಟರೇಟ್ ತರಹವೇ ಅನುಮಾನಾಸ್ಪದ.

ಆದರೆ, ಮಂಗಗಳ ಗ್ರಹ ಆ ರೀತಿಯ ಕಾಲ್ಪನಿಕ ಸೃಷ್ಟಿಯಲ್ಲ. ಇದಕ್ಕೆ ಸಾಕ್ಷ್ಯಾಧಾರ ಪೂರಕವಾಗಿ ಪ್ಲಾನೆಟ್ ಆಫ್ ದಿ ಏಪ್ಸ್ (೧೯೬೮) ಮತ್ತು ಪ್ಲಾನೆಟ್ ಆಫ್ ದಿ ಏಪ್ಸ್ (೨೦೦೧) ಎಂಬ ಎರಡು ವೈಜ್ಞಾನಿಕ ಡಾಕ್ಯುಮೆಂಟರಿ ಚಿತ್ರಗಳು ಸಹ ಇವೆ.

ಲೇಖಕ ಚಾರ್ಲ್‍ಟನ್ ಹೆಸ್ಟನ್ ,"ಡಾ."ಜಾನ್ ಗ್ರೇಯಂತೆ ಖೋಟಾ ಡಾಕ್ಟರೇಟ್ ಪಡೆದಿಲ್ಲವಾದರೂ, ಈಗಾಗಲೇ ಎರಡು ಬಾರಿ ಮಂಗಗಳ ಗ್ರಹಕ್ಕೆ ಪ್ರಯಾಣಮಾಡಿ ಆ ಗ್ರಹದ ನಿವಾಸಿಗಳ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದಾರೆ. ಮಂಗಗಳಿಂದಲೇ ಮಾನವರೆನ್ನುವ ವೈಜ್ಞಾನಿಕ ಸತ್ಯ ಸರ್ವವಿದಿತವಾಗಿರುವಾಗ, ಗಂಡು-ಗಂಡುಗಳ ನಡುವೆ ವಿರಸ ಹೇಗೆ ಏರ್ಪಡುತ್ತದೆ, ಆ ರೀತಿಯ ವಿರಸ ಉಂಟಾದಾಗ ನಿವಾರಿಸುವ ಉಪಾಯಗಳು ಯಾವುವು ಎಂಬುದನ್ನು ಹೆಸ್ಟನ್ನರು ತಮ್ಮ ಪಾಂಡಿತ್ಯ ಮತ್ತು ಅನುಭವ ಪೂರ್ಣ ಪುಸ್ತಕದಲ್ಲಿ ವಿವರಿಸಿದ್ದಾರೆ.

ಚಾರ್ಲ್‌ಟನ್ ಹೆಸ್ಟನ್ನರ ಈ ಅಪರೂಪದ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದವರು ಕೆಂಗಲ್ ಹನುಮಂತಯ್ಯ. ಹಲವು ವರ್ಷಗಳ ಹಿಂದೆಯೇ ಒಂದೆಡೆಯಿಂದ ಇನ್ನೊಂದೆಡೆಗೆ ಚಂಗನೆ ನೆಗೆಯಲು ಸಾಧ್ಯವಾಗುವಂತೆ ಬೆಂಗಳೂರಿನಲ್ಲಿ ಮೃಗಾಲಯವೊಂದನ್ನು ಸ್ಥಾಪಿಸಿ ಶ್ರೀಯುತರು ಮಂಗಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ವಾರದಿಂದ ವಾರಕ್ಕೆ ನೀವು ಇಲ್ಲಿ ಕಲಿಯಲಿರುವ ಮತ್ತು ಅರಿಯಲಿರುವ ಮಹತ್ವದ ಸಂಗತಿಗಳು ಹತ್ತಾರು. ಇಲ್ಲಿನ ಒಳನೋಟಗಳು ನಿಮ್ಮ ಆಸಕ್ತಿಯನ್ನು ಹೆಚ್ಚಿಸಬಹುದು ಎಂಬುದು ನಮ್ಮ ನಂಬಿಕೆ.

ಸದ್ಯದಲ್ಲೇ ನಿರೀಕ್ಷಿಸಿ, ಚಾರ್ಲಟನ್ ಹೆಸ್ಟನ್ನರ "ಆತ ಮಂಗಗಳ ಗ್ರಹದಿಂದ.. ಈತನೂ.. ಮಂಗಗಳ ಗ್ರಹದಿಂದ"
-ಸಂಪಾದಕ

6 Comments:

Anonymous Anonymous said...

Good finding, I didn't know the grey history of John Gray. As Always, majavani lived upto its expectations in investigation journalism. Way to go

- Enlightened Kannadiga

January 24, 2006 10:34 PM  
Blogger V.V. said...

ಕನ್ನಡಿಗರೊಬ್ಬರು ಬುದ್ಧನಾಗಿರುವುದು ಹೆಮ್ಮೆಯ ವಿಷಯ.

ನಮ್ಮ ಅಜಾಗರೂಕತೆಯಿಂದ ಜಾನ್ ಗ್ರೇಯವರ ಡಾಕ್ಟರೇಟ್ ವಿಷಯ ಹೊರಬಿದ್ದಿದೆ. ಇದಕ್ಕಾಗಿ ನಾವು ವಿಷಾದಿಸುತ್ತೇವೆ.

ಪಿ.ಎಚ್.ಡಿ ಪದವಿ ಪಡೆಯಲು ಹಣದ ಜೊತೆಗೆ ಶ್ರಮ, ಜ್ಞಾನ, ಬುದ್ಧಿವಂತಿಕೆ ಬೇಕಾಗಿರುವುದು ಶೋಚನೀಯ. "ಡಾ." ಮತ್ತು "ಡಾ. ಅಲ್ಲದವರು" ನಡುವಿನ ವರ್ಗ ಸಂಘರ್ಷ ತಡೆಗಟ್ಟಲು ಸರ್ಕಾರ ಪ್ರತಿ ಮಗುವಿಗೂ ಹುಟ್ಟಿದ ಕೂಡಲೆ "ಪಿ.ಎಚ್.ಡಿ" ಪದವಿಯನ್ನು ನೀಡುವ ಯೋಚನೆ ಮಾಡಬೇಕು.

ವಂದನೆಗಳೊಂದಿಗೆ,

ವಿ.ವಿ.

ಸಂಪಾದಕ

January 26, 2006 4:47 PM  
Anonymous Anonymous said...

majavaaNi sakat maja koDtu!

March 03, 2006 12:05 PM  
Blogger V.V. said...

ದಯವಿಟ್ಟು ಕ್ಷಮಿಸಿ. ಮುಂದೆ ಹೀಗಾಗದಂತೆ ಖಂಡಿತಾ ಎಚ್ಚರ ವಹಿಸುತ್ತೇವೆ.

ವಂದನೆಗಳೊಂದಿಗೆ,

ವಿ.ವಿ.

March 15, 2006 3:33 PM  
Anonymous Anonymous said...

In story about MMWV on ThatsKannada there is a link to webpage http://thatskannada.indiainfo.com/column/hulikal/index.html. This is not working. Please change it to http://thatskannada.oneindia.in/column/hulikal/index.html

June 17, 2006 6:32 AM  
Blogger V.V. said...

Dear Anonymous,

Thanks for reading my blog and pointing out the problem with the link.

Unlike some real newspapers, I do want to correct the errors that are brought to my attention.

The link has been fixed now.

Thanks again,

Seshadri

June 18, 2006 1:02 AM  

Post a Comment

Links to this post:

Create a Link

<< Home