ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Thursday, January 19, 2006

ಮಜಾವಾಣಿ ತನಿಖಾ ವರದಿ


[ಇಂದು ಪತ್ರಿಕೋದ್ಯಮದಲ್ಲಿ, ಪ್ರಭಾವಿ ರಾಜಕಾರಣಿಗಳ, ಅಧಿಕಾರಿಗಳ, ಗಣ್ಯವ್ಯಕ್ತಿಗಳ, ಮಠಾಧಿಪತಿಗಳ ಮುಚ್ಚಿಟ್ಟ ತಪ್ಪುಗಳನ್ನು ಹೊರಗೆಳೆಯುವುದು "ತನಿಖಾ ವರದಿ" ಎಂಬ ತಪ್ಪು ಅಭಿಪ್ರಾಯವಿದೆ. ಉದಾಹರ್‍ಅಣೆಗೆ, ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕೆಯ ರೀಟು ಸರೀನ್‍ರವರು ಬರೆದಿರುವ ಈ ಲೇಖನದಲ್ಲಿ, ರಾಜಕೀಯ ನಾಯಕರು, ಹಿರಿಯ ಅಧಿಕಾರಿಗಳು, ಶ್ರೀಮಂತ ಉದ್ಯಮಿಗಳು ಇತ್ಯಾದಿ ಅಲ್ಪಸಂಖ್ಯಾತರು ಮಾಡಿರಬಹುದಾದ ತಪ್ಪುಗಳ ವಿಚಾರವಿದೆಯೇ ಹೊರತು, ನಮ್ಮ ಸಮಾಜದಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಜನ-ಸಾಮಾನ್ಯರ ವಿಚಾರವೇ ಇಲ್ಲ.

ನಮ್ಮ ಪತ್ರಿಕೆ ಅಲ್ಪಸಂಖ್ಯಾತರ ಮೇಲಿನ ಈ ದಬ್ಬಾಳಿಕೆಯನ್ನು ಯಾವುದೇ ಮುಲಾಜಿಲ್ಲದೆ ಖಂಡಿಸುತ್ತದೆ.

ಅಲ್ಪಸಂಖ್ಯಾತರ ಮನ ನೋಯಿಸುವ ಇಂತಹ "ತನಿಖಾ ವರದಿಗಳ" ವಿರುದ್ಧ ನಮ್ಮ ಪತ್ರಿಕೆ ವ್ಯವಸ್ಥಿತ ಹೋರಾಟ ನಡೆಸಲು ಸಿದ್ಧವಾಗಿದೆ. ಈ ದಿಸೆಯಲ್ಲಿ, "ಮಜಾವಾಣಿ ತನಿಖಾ ವರದಿ" ಎಂಬ ಅಂಕಣವನ್ನು ವಾರಕ್ಕೊಮ್ಮೆ ಆಗಾಗ್ಗೆ ಪ್ರಕಟಿಸಲು ನಿಶ್ಚಯಿಸಿದ್ದೇವೆ.

ಈ ಅಂಕಣ ಮಾಲೆಯ ಮೂಲ ಉದ್ದೇಶ ಸಮಾಜದ ಗಣ್ಯರ, ಪ್ರಭಾವಿ ವ್ಯಕ್ತಿಗಳ ಒಳ್ಳೆಯತನವನ್ನು ಬಯಲಿಗೆಳೆಯುವುದು. ಇದರ ಜೊತೆಗೇ, ನಮ್ಮ ಪತ್ರಿಕೆಯೊಂದನ್ನು ಬಿಟ್ಟು ಉಳಿದೆಲ್ಲಾ ಪತ್ರಿಕೆಗಳವರನ್ನೂ ಮರಳು ಮಾಡಿ ತನ್ನ ಬುಟ್ಟಿಗೆ ಹಾಕಿಕೊಂಡಿರುವ ಜನ-ಸಾಮಾನ್ಯರ ಬಂಡವಾಳವನ್ನು ಬರಿದು ಮಾಡುವುದೂ ಆಗಿದೆ. - ಸಂಪಾದಕ]


ಹೊರ ರಾಜ್ಯಗಳಲ್ಲಿ ಕನ್ನಡ ಬೆಳೆಸಲು ಸರ್ಕಾರದಿಂದ ಐದು ಅಂಶಗಳ ಕಾರ್ಯಕ್ರಮ

ಕನ್ನಡಿಗರ ಜಡತನ ಅಂತಹ ಹೊಸ ವಿಚಾರವೇನೂ ಅಲ್ಲ. ಈ ವಿಷಯದ ಕುರಿತು ಹಲವಾರು ಪಾಂಡಿತ್ಯ ಪೂರ್ಣ ಸಂಶೋಧನಾ ವರದಿಗಳು ಈಗಾಗಲೇ ಪ್ರಕಟವಾಗಿವೆ.

ಈ ಜಡತನದಿಂದ ಕನ್ನಡಿಗರು, ಅನ್ಯ ಭಾಷಸ್ತರಿಗೆ ಹೋಲಿಸಿದರೆ ತಮ್ಮ ಸ್ವಸ್ಥಾನದಿಂದ ಕದಲಲೊಲ್ಲರು. ಹೀಗಾಗಿ ಕರ್ನಾಟಕದಲ್ಲಿ ಅನ್ಯ ಭಾಷಿಗರ ಸಂಖ್ಯೆ ಹೆಚ್ಚಾದಂತೆ ನೆರೆ ರಾಜ್ಯಗಳಲ್ಲಿ ಕನ್ನಡಿಗರ ಸಂಖ್ಯೆ ಮಾತ್ರ ಬೆಳೆಯುತ್ತಿಲ್ಲ.

ಈ ಪರಿಸ್ಥಿತಿ ಒಟ್ಟಾರೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮೇಲೆ ಪರಿಣಾಮ ಬೀರಿದೆಯಾದರೂ, ಇದರಿಂದ ಮುಖ್ಯವಾಗಿ ಹೊಡೆತ ತಿಂದಿರುವುದೆಂದರೆ ಕನ್ನಡ ಚಿತ್ರರಂಗ. ಕರ್ನಾಟಕದಲ್ಲಿಯೇ ಯಾರೂ ನೋಡದ ಚಿತ್ರಗಳನ್ನು ಹೊರ ನಾಡುಗಳಿಗೆ ಕಳುಹಿಸುವ ಕನ್ನಡ ಚಿತ್ರ ನಿರ್ಮಾಪಕರ ಆಲೋಚನೆ ಈ ಪರಿಸ್ಥಿತಿಯಿಂದಾಗಿ ಮಣ್ಣು ಪಾಲಾಗಿದೆ.

ಇವೆಲ್ಲಾ ಹೊಸ ವಿಷಯಗಳೇನೂ ಅಲ್ಲ.

ಹೊಸ ವಿಷಯವೆಂದರೆ, ಇಂತಹ ವಿಷಮ ಪರಿಸ್ಥಿತಿಯನ್ನು ನಿವಾರಿಸಲು ಕರ್ನಾಟಕ ಸರ್ಕಾರ ಹಾಕಿಕೊಂಡಿರುವ ಐದು ಅಂಶಗಳ ರಹಸ್ಯ ಕಾರ್ಯಕ್ರಮ.

ಈ ಕಾರ್ಯಕ್ರಮ ಎಷ್ಟು ರಹಸ್ಯದ್ದೆಂದರೆ, ಮುಖ್ಯಮಂತ್ರಿಗಳಾಗಲೀ, ಸಚಿವರಾಗಲೀ ಅಥವಾ ಅಧಿಕಾರಿಗಳಾಗಲೀ ಇಂತಹ ಕಾರ್ಯಕ್ರಮವೊಂದು ಇದೆ ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು ಸಿದ್ಧರಿಲ್ಲ. ವಿನಯಶೀಲರೂ, ನಿಗರ್ವಿಗಳಿಂದಲೇ ತುಂಬಿರುವ ನಮ್ಮ ಸರ್ಕಾರದಲ್ಲಿ ಇಂತಹ ಉತ್ತಮ ಕಾರ್ಯಕ್ರಮ ತಾನೇ ರೂಪಿಸಿದ್ದೆಂದು ಹೇಳಿಕೊಳ್ಳಲು ಒಬ್ಬರಾದರೂ ನಮ್ಮ ವರದಿಗಾರರ ಮುಂದೆ ಹೇಳಿಕೊಳ್ಳಲಿಲ್ಲ; ಬದಲಿಗೆ, ರಾಜ್ಯ ಮತ್ತು ಭಾಷೆಯ ಹಿತ ರಕ್ಷಣೆಯ ಸಲುವಾಗಿ ಈ ವರದಿ ಪ್ರಕಟಿಸಬಾರದೆಂದು ನಮ್ಮ ಪತ್ರಿಕೆಯನ್ನು ಹಲವರು ಒತ್ತಾಯಿಸಿದರು.

ಐದು ಅಂಶಗಳ ಕಾರ್ಯಕ್ರಮದ ವಿವರ:

೧. ಬೆಟರ್ ಬಿಹಾರ್ ಸ್ಕೀಮ್
ಈ ಅಂಶದಡಿ, ಕರ್ನಾಟಕಕ್ಕೆ ಕೇಂದ್ರದಿಂದ ಬರಬೇಕಿರುವ ಹಣವನ್ನು ಪೂರ್ಣವಾಗಿ ಉಪಯೋಗಿಸದೆ, ಆ ಹಣ ಬಿಹಾರಕ್ಕೋ, ತಮಿಳುನಾಡಿಗೋ ಹೋಗುವಂತೆ ಮಾಡುವುದು ಜೊತೆಗೇ ಕರ್ನಾಟಕದಲ್ಲಿ ಜೀವನ ದುಸ್ತರ ಮಾಡುವುದು
ಶಿಕ್ಷಣ, ಆರೋಗ್ಯ, ಉದ್ಯೋಗ ಇತ್ಯಾದಿ ವಿಚಾರಗಳಲ್ಲಿ ಪರಿಸ್ಥಿತಿ ವಿಷಮಿಸುವಂತೆ ಮಾಡಿ, ಕನ್ನಡದ ಜನ ಕರ್ನಾಟಕ ಬಿಟ್ಟು ಬಿಹಾರಕ್ಕೂ ಹೋಗಲು ಸಿದ್ಧರಾಗುವಂತೆ ಮಾಡುವುದು.

೨. ಬಿಟ್ಟರ್ ಬೆಂಗಳೂರು ಸ್ಕೀಮ್
ಕರ್ನಾಟಕದ ಇತರೆ ಊರುಗಳಿಂದ ಬೆಂಗಳೂರಿಗೆ ಜನರು ಬಂದು ನೆಲೆಸದಂತೆ ಮಾಡಲು ಬೆಂಗಳೂರಿನಲ್ಲೆ ಭೂಮಿಯ ಬೆಲೆಯನ್ನು ಆಕಾಶಕ್ಕೆ ಏರಿಸುವ ಯೋಜನೆ. ಜೊತೆಗೆ, ಬೆಂಗಳೂರಿನಲ್ಲಿ ಟ್ರಾಫಿಕ್ ಹೆಚ್ಚಿಸಿ, ರೋಡುಗಳು ಹದಗೆಡುವುವಂತೆ ನೋಡಿಕೊಳ್ಳುವುದು.

೩. ಷಟರ್ ಕನ್ನಡ ಕಂಪೆನೀಸ್ ಸ್ಕೀಮ್
ಕನ್ನಡಿಗರಿಗೆ ಉದ್ಯೋಗ ನೀಡಬಲ್ಲಂತಹ (ಉಳಿದ ಕಂಪೆನಿಗಳಿಗೆ ಹೋಲಿಸಿದರೆ) ಕನ್ನಡಿಗರೇ ಸ್ಥಾಪಿಸಿ, ನಡೆಸುತ್ತಿರುವ ಕಂಪೆನಿಗಳನ್ನು ಕರ್ನಾಟಕದಿಂದ ಹೊರ ಹಾಕುವುದು. ಈ ಅಂಶದ ಸಮರ್ಪಕತೆಯನ್ನು ಪರೀಕ್ಷಿಸಲು, ಇನ್ಫೋಸಿಸ್ ಸಂಸ್ಥೆಯನ್ನು ಗುರುತಿಸಲಾಗಿದೆ.

೪. ನಾಲ್ಕನೆಯ ಅಂಶ ಏನೆಂದು ಮರೆತುಹೋಗಿದೆ.

೫. ವಾಸ್ತವದಲ್ಲಿ, ಸರ್ಕಾರದ ಕಾರ್ಯಕ್ರಮ ನಾಲ್ಕು ಅಂಶಗಳದ್ದೇ ಆಗಿದ್ದರೂ, ಇಂತಹ ಒಂದು ಒಳ್ಳೆಯ ಕಾರ್ಯಕ್ರಮ ರೂಪಿಸಿರುವ ಸರ್ಕಾರವನ್ನು ಪ್ರಶಂಸಿಸಲು, ಇನ್ನೂ ಒಂದು ಅಂಶವನ್ನು ನಮ್ಮ ಪತ್ರಿಕೆ ಸೇರಿಸಿದೆ. ಜೊತೆಗೆ, ಮುಖ್ಯಮಂತ್ರಿಗಳ ಖಾಸಾ ನ್ಯೂಮರಾಲಾಜಿಸ್ಟ್ ಪ್ರಕಾರ, ಐದು ನಾಲ್ಕಕ್ಕಿಂತ ದೊಡ್ಡದು.

Labels: ,

4 Comments:

Anonymous Anonymous said...

"ಮುಖ್ಯಮಂತ್ರಿಗಳ ಖಾಸಾ ನ್ಯೂಮರಾಲಾಜಿಸ್ಟ್ ಪ್ರಕಾರ, ಐದು ನಾಲ್ಕಕ್ಕಿಂತ ದೊಡ್ಡದು." ಎಂದು ಬರೆದಿದ್ದೀರಿ. ಅದು ಸತ್ಯವೇ ಅಲ್ಲವೇ?!

January 22, 2006 10:01 PM  
Blogger V.V. said...

ನಾಲ್ಕು ಐದುಗಳ ನಡುವಿನ ಯಾವುದು ಹೆಚ್ಚೆಂಬ ಈ ವಿವಾದಲ್ಲಿ, ನಮ್ಮ ಪತ್ರಿಕೆ ಪಕ್ಷಪಾತ ತೋರದೆ ನಿರ್ಲಿಪ್ತವಾಗಿರಲು ಬಯಸುತ್ತದೆ.

ವಂದನೆಗಳೊಂದಿಗೆ,

ವಿ.ವಿ.
ಸಂಪಾದಕ ಮಜಾವಾಣಿ

January 23, 2006 5:01 PM  
Blogger Dr U B Pavanaja said...

ನಾಲ್ಕನೆಯ ಅಂಶ: ಬೆಂಗಳೂರಿನಿಂದ ಹೊರ ರಾಜ್ಯಗಳಿಗೆ ತಮ್ಮ ಕಂಪೆನಿ ಮತ್ತು ಉದ್ಯೋಗಿಗಳನ್ನು ಕಳುಹಿಸಲು ತೀರ್ಮಾನಿಸಿರುವ ಇನ್ಫೋಸಿಸ್‌, ವಿಪ್ರೋ ಮತ್ತಿತರೆ ಐ.ಟಿ. ಕಂಪೆನಿಗಳಿಗೆ ಪ್ರೋತ್ಸಾಹ ನೀಡುವುದು. ಇದಕ್ಕಾಗಿ ಕಂಪೆನಿಗಳ ಮುಖ್ಯಸ್ಥರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುವುದು. ನಾರಾಯಣ ಮೂರ್ತಿಯವರಿಗೆ ಈಗಾಗಲೆ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದರಿಂದ ನೀಲೆಕಣೆಯವರಿಗೆ ನೀಡಲಾಗುವುದು. ಈ ಪ್ರಶಸ್ತಿ ನೀಡಬೇಕಾದರೆ ಕಂಪೆನಿಗಳು ಪಾಲಿಸಬೇಕಾದ ನಿಯಮವೇನೆಂದರೆ ಅವರು ಬೆಂಗಳೂರಿನಿಂದ ಹೊರರಾಜ್ಯಗಳಿಗೆ ಕಳುಹಿಸುವ ಉದ್ಯೋಗಿಗಳು ಕನ್ನಡಿಗರಾಗಿರಬೇಕು. ಈ ನಿಯಮಕ್ಕೆ ಈಗಾಗಲೆ ಕೆಲವು ಕಂಪೆನಿಗಳಿಂದ ಆಕ್ಷೇಪ ವ್ಯಕ್ತವಾಗಿದೆ. ಅವರ ಪ್ರಕಾರ ಐ.ಟಿ. ಕಂಪೆನಿಗಳಲ್ಲಿ ಕನ್ನಡಿಗರನ್ನು ಭೂತಕನ್ನಡಿ ಹಿಡಿದು ಹುಡುಕಬೇಕಾಗಿದೆ.

January 24, 2006 1:43 AM  
Blogger V.V. said...

ಮಾನ್ಯ "ಪವನಜರೇ",

ಇಂತಹ ಸರ್ಕಾರಿ ರಹಸ್ಯವನ್ನು ನಮ್ಮಂತಹ ಪತ್ರಿಕೆಗಳಿಗೆ ಒದಗಿಸುವಾಗ, "ಪವನಜ" ಎಂಬ ನಾಮಧೇಯ ಉಪಯೋಗಿಸುವ ನಿಮ್ಮ ಚಾತುರ್ಯ ಮೆಚ್ಚ ತಕ್ಕದ್ದೇ. ಆದರೆ, ಯೋಚಿಸ ಬೇಕಾಗಿಲ್ಲ. ನಮ್ಮ ಪತ್ರಿಕೆಯಲ್ಲಿ ಪ್ರಕಟವಾಗುವ ವರದಿಗಳ ಮೂಲಗಳ ಅನಾಮಧೇಯತೆಯನ್ನು ರಕ್ಷಿಸಲು ನಾವು ಕಟಿ ಬದ್ಧವಾಗಿ ನಿಂತಿದ್ದೇವೆ. ಈ ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ಸೆರೆಮನೆವಾಸ ಅನುಭವಿಸಲೂ ನಾವು ಸಿದ್ಧರಿದ್ದೇವೆ.

ನೀವು "ಪವನಜ" ಹೆಸರಿನಲ್ಲಿ ನಡೆಸುತ್ತಿರುವ ವಿಶ್ವ ಕನ್ನಡ ಕನ್ನಡದ ಪ್ರಪ್ರಥಮ ಇಂಟರ್‌ನೆಟ್ ಪತ್ರಿಕೆ ಮತ್ತು ಅದರಲ್ಲಿಯೇ ಅಡಕವಾಗಿರುವ ಅಂತರರಾಷ್ಟ್ರೀಯ ಸಿನೆಮಾ ಸುದ್ದಿಗಳ ವಿಚಾರವನ್ನು ನಾವು ಯಾರಿಗೂ ಹೊರಗೆಡುವುದಿಲ್ಲ. ಇದು ಇರೋ ಮೂರು ಜನ ಓದುಗರ ಹೆಸರಲ್ಲಿ ನಾವು ಮಾಡುವ ಪ್ರತಿಜ್ಞೆ.


ವಂದನೆಗಳೊಂದಿಗೆ,

ಸಂಪಾದಕ

January 24, 2006 2:51 PM  

Post a Comment

Links to this post:

Create a Link

<< Home