ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Tuesday, January 17, 2006

ಸಾಹಿತ್ಯರಂಗದಲ್ಲಿ 'ಕೋಲಾ'ಹಲ

"ಮೊದಲ ಹಂತವಾಗಿ ಕೋಕಾಕೋಲ ಕುಡಿಯೋದನ್ನ ಬಿಡೋಣ" - ಯು.ಆರ್.ಎ. ಕರೆ
ಮುಂಬೈ, ಜನವರಿ ೩೧, ೨೦೧೬:ಇಲ್ಲಿಯವರೆಗೆ ದೂರದರ್ಶನದಲ್ಲಿ, ಬಿಲ್‌ಬೋರ್‍ಡ್‍ಗಳ ಮೇಲೆ ಐಷ್ವರ್ಯ ರೈ, ಶಾರೂಖ್ ಖಾನ್, ಸಚಿನ್ ತೆಂಡೂಲ್ಕರ್‌ಗಳ ಮೂಲಕ ನಡೆಯುತ್ತಿದ್ದ ಕೋಕ್-ಪೆಪ್ಸಿಗಳ ನಡುವಿನ ಕೋಲಾ ಕದನ ಈಗ ಕನ್ನಡ ಸಾಹಿತ್ಯರಂಗಕ್ಕೂ ಕಾಲಿಟ್ಟಿರುವುದು ಕೋಲಾಹಲಕಾರಿ ವಿಷಯವಾಗಿದೆ.

ಈ ಸೋಡಾ ಸಮರದಲ್ಲಿ, ಪೆಪ್ಸಿ ಕಂಪೆನಿ ಕನ್ನಡದ ಖ್ಯಾತ ಸಾಹಿತಿ ಯು.ಆರ್.ಅನಂತಮೂರ್ತಿಯವರನ್ನು ಸಹಿ ಮಾಡಿ ತನ್ನ ಪ್ರಥಮ ಅಸ್ತ್ರವನ್ನು ಬಿಟ್ಟಿದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ.

ಈ ಮಾರ್ಕೆಟಿಂಗ್ ಯುದ್ಧದಲ್ಲಿ, "ಮೊದಲ ಹಂತವಾಗಿ ಕೋಕಾಕೋಲ ಕುಡಿಯೋದನ್ನ ಬಿಡೋಣ" ಎಂದು ಅನಂತಮೂರ್ತಿಯವರು ಕರೆಯಿತ್ತಿರುವುದು ಈ ವರದಿಯನ್ನು ಮತ್ತಷ್ಟು ಪುಷ್ಟೀಕರಿಸಿದೆ.

ಇಷ್ಟೆಲ್ಲಾ ಹೈಪ್ ಮಧ್ಯೆ, ಅನಂತಮೂರ್ತಿಯವರ ಮುಂದಿನ ಕೃತಿ `ಪೆಪ್ಸಿ ಪ್ರಾಯೋಜಿತ "ನೊರೆ"' ಜನ ಮನ್ನಣೆಗೆ ಮತ್ತು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗುವುದೋ ಎಂದು ಕಾದು ನೋಡ ಬೇಕಾಗಿದೆ.

ಕನ್ನಡ ಸಾಹಿತ್ಯ ಉಳಿಸುವುದು-ಬೆಳೆಸುವುದು ಹೇಗೆಂದು ಬ್ಲಾಗುಗಳಲ್ಲಿ ವೆಬ್ ಸೈಟುಗಳಲ್ಲಿ ಕಾವೇರಿದ ಚರ್ಚೆ ನಡೆಯುತ್ತಿರುವಂತೆಯೇ, ಈ ಸಾಹಿತ್ಯ-ಸೋಡಾಗಳ ಸಮ್ಮಿಳನವಾಗಿರುವುದು ಸಾಹಿತ್ಯ ವಲಯದಲ್ಲಿ ಮಾತ್ರವಲ್ಲ, ಮಾರ್ಕೆಟಿಂಗ್ ಜಗತ್ತಿನಲ್ಲೂ ಅತೀವ ಚರ್ಚೆಗೆ ಗುರಿಯಾಗಿದೆ.

ಆದರೆ, ಪಾಟಿಯಾಲಾದ ಗ್ಯಾನಿ ಜೈಲ್ ಸಿಂಗ್ ವಿ.ವಿ,ಯ ಮಾರ್ಕೆಟಿಂಗ್ ಪ್ರಾಧ್ಯಾಪಕ ಡಾ.ಭೇಜನ್ ಸಿಂಗ್ ಅಹ್ಲುವಾಲಿಯಾ ಪ್ರಕಾರ ಇದೇನೂ ಅಂತಹ ಆಶ್ಚರ್ಯಕರ ಬೆಳವಣಿಗೆ ಏನೂ ಅಲ್ಲ, ಇಂತಹ ಒಪ್ಪಂದಗಳಿಂದ ಸೋಡಾ ಕಂಪೆನಿ ಮತ್ತು ಸಾಹಿತಿಗಳು ಇಬ್ಬರಿಗೂ ಲಾಭವಾಗುತ್ತದೆ.

ಕೋಕ್ ಪ್ರತ್ಯಸ್ತ್ರ ? ಪೆಪ್ಸಿ ಕಂಪೆನಿಯವರು ಅನಂತ ಮೂರ್ತಿಯವರನ್ನು ಸಹಿ ಮಾಡಿರುವ ಸುದ್ದಿ ಹೊರ ಬರುತ್ತಿರುವಂತೆಯೇ, ಕೋಕಾಕೋಲ ಕಂಪೆನಿ ಜ್ನಾನಪೀಠ ಪ್ರಶಸ್ತಿ ಮತ್ತು ಇತರೆ ಸಾಹಿತ್ಯ ಪ್ರಶಸ್ತಿಗಳನ್ನು ಪ್ರಾಯೋಜಿಸುವ ಸನ್ನಾಹ ನಡೆಸಿರುವ ವಿಚಾರ ಸಹ ಹೊರ ಬಂದಿದೆ. ಈ ಸುದ್ದಿ ನಿಜವೇ ಆದಲ್ಲಿ, ಜ್ನಾನಪೀಠ ಪ್ರಶಸ್ತಿಯನ್ನು "ಕೋಕ್ ಜ್ನಾನಪೀಠ ಪ್ರಶಸ್ತಿ" ಎಂದು ಕರೆಯಲಾಗುವುದು.

ಕೆಲ ಒಳ ವಲಯಗಳ ಪ್ರಕಾರ, ಈ ಹೊಸ ನಾಮಧೇಯವನ್ನು, ಹಿಂದೆ ಪ್ರಶಸ್ತಿ ಪಡೆದವರಿಗೂ ಅನ್ವಯಿಸಲಾಗುವುದು. ಹಾಗೇನಾದರೂ ಆದಲ್ಲಿ, ಕೋಕ್-ಜ್ನಾನಪೀಠ ಪ್ರಶಸ್ತಿ ವಿಜೇತ ಯು.ಆರ್.ಅನಂತಮೂರ್ತಿಯವರ ಪೆಪ್ಸಿ ಪ್ರಾಯೋಜಿತ ನೊರೆ ಕಾದಂಬರಿಯನ್ನು ನಿಮ್ಮ ಹತ್ತಿರದ ಪಿಜ್ಜಾಹಟ್ಟಿನಲ್ಲಿ ಕಾಣುವ ದಿನಗಳು ದೂರವಿಲ್ಲ.

Labels: ,

8 Comments:

Anonymous srikanth said...

ವಿಪರ್ಯಾಸ ನೋಡಿ, "ಮೊದಲ ಹಂತವಾಗಿ ಕೋಕಾಕೋಲ ಕುಡಿಯೋದನ್ನ ಬಿಡೋಣ" ಲಿಂಕ್ ನ ಲೇಖನವಿರುವ ಪುಟದಲ್ಲಿ ಅಮೆರಿಕ ಕಂಪನಿಗಳ ಹಲವು ಜಾಹಿರಾತುಗಳಿದ್ದವು. :-)

January 18, 2006 2:11 AM  
Blogger V.V. said...

ಶ್ರೀಕಾಂತ್‍ರವರೆ, ಈ ವಿಚಾರವನ್ನು ನಮ್ಮ ಪತ್ರಿಕೆಯ ಗಮನಕ್ಕೆ ತಂದಿದ್ದಕ್ಕೆ ನಿಮಗೆ ನಮ್ಮ ಪತ್ರಿಕೆಯ ಪರವಾಗಿ ವಂದನೆಗಳು. ಆದರೆ, ಇದು ನೀವೆಂದಂತೆ, ವಿಪರ್ಯಾಸವಲ್ಲ. ನಮ್ಮ ಪತ್ರಿಕೆಯ ವಿಶ್ವಾಸರ್ಹತೆಗೆ ಧಕ್ಕೆ ಮಾಡಿ ಗ್ಲೋಬಲ್ ಡಾಮಿನೆನ್ಸ್ ಸ್ಥಾಪಿಸಲು ವಿದೇಶಿ ಕೈಗಳು ಮಾಡಿರುವ ಸಂಚು.

ವಂದನೆಗಳೊಂದಿಗೆ,

ಸಂಪಾದಕ

January 18, 2006 12:54 PM  
Blogger Sriram said...

ನಿಮ್ಮ ಬ್ಲಾಗಿನಬಗ್ಗೆ ತಿಳಿದಿರಲಿಲ್ಲ. ಚೆನ್ನಾಗಿದೆ. ಘನಘಂಭೀರರಾದ ನಮಗೆ ಇಂಥ ಪತ್ರಿಕೆಗಳ ಅಗತ್ಯವಿದೆ. ಜಾಹೀರಾತಿಲ್ಲದೇ ಪ್ರಕಟವಾಗುತ್ತಿರುವ ಈ ಪತ್ರಿಕೆಯನ್ನು ಕಂಡು ಲಂಕೇಶ್ (ಎಲ್ಲಿದ್ದರೂ) ಸಂತೋಷಪಟ್ಟಾರೆಯೆ?

January 19, 2006 3:32 AM  
Blogger V.V. said...

ನಮ್ಮ ಪತ್ರಿಕೆಯ ಬಗ್ಗೆ ರಾವಣನ ಅಭಿಪ್ರಾಯವೇನೆಂದು ತಾವು ಕುತೂಹಲಿಸಿರುವುದು ಕುತೂಹಲಕಾರಿಯಾಗಿದೆ. ಆತ ಎಲ್ಲಿದ್ದರೂ ಪತ್ತೆ ಹಚ್ಚಿ, ಸಂದರ್ಶಿಸಿ ವರದಿಮಾಡುವಂತೆ ನಮ್ಮ ಪತ್ರಿಕೆಯ ಎಲ್ಲ ವರದಿಗಾರರಿಗೂ ಅಣತಿ ಇತ್ತೀದ್ದೇನೆ.

ವಂದನೆಗಳೊಂದಿಗೆ,

ಸಂಪಾದಕ

January 19, 2006 1:01 PM  
Anonymous Anonymous said...

ಲಂಕೇಶ್ ಪತ್ರಿಕೆಯೋ ಪುತ್ರಿಕೆಯೋ ಎಂಬದನ್ನು ಶ್ರೀರಾಮ ಅವರು ಸ್ಪಷ್ಟಪಡಿಸಿದರೆ ಒಳ್ಳೆಯದು.

-ವಾಯುಪುತ್ರ

January 27, 2006 12:10 AM  
Blogger V.V. said...

ಶ್ರೀರಾಮ ಮಜಾವಾಣಿಯ ಕುರಿತು ಲಂಕೇಶನ ಅಭಿಪ್ರಾಯ ಏನಿರಬಹುದೆಂದು ಕುತೂಹಲಿಸುವುದು. ಅದಕ್ಕೆ ಪ್ರತಿಕ್ರಿಯಿಸುವ ವಾಯುಪುತ್ರ, ಇಂದ್ರಜಿತ್ ಮತ್ತು ಆತನ ಸಹೋದರಿಯ ಬಗ್ಗೆ ಶ್ರೀರಾಮನಿಂದ ಸ್ಪಷ್ಟನೆ ಕೇಳುವುದು - ಇದೊಳ್ಳೆ ರಾಮಾಯಣ ಆಯಿತಲ್ಲಾ?!

..
ವಿ.ವಿ.
ಸಂಪಾದಕ ಮಜಾವಾಣಿ

January 27, 2006 10:58 AM  
Anonymous Anonymous said...

In story of 'Saahityarangadalli Kolahala' on ThatsKannada there is a link to webpage http://thatskannada.indiainfo.com/category/specials/whatshot/200303ura.html. This is not working. Please change it to http://thatskannada.oneindia.in/category/specials/whatshot/200303ura.html

Thanks.

June 19, 2006 5:08 AM  
Anonymous Anonymous said...

In story of 'Saahityarangadalli Kolahala' on ThatsKannada there is a link to webpage http://thatskannada.indiainfo.com/
category/specials/whatshot/
200303ura.html. This is not working. Please change it to http://thatskannada.oneindia.in/
category/specials/whatshot/
200303ura.html

i.e. Instead of indiainfo.com change it to oneindia.in

Thanks in advance.

June 19, 2006 5:10 AM  

Post a Comment

Links to this post:

Create a Link

<< Home