ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Monday, January 16, 2006

ಅಮೆರಿಕಂದಮ್ಮಗಳ ಆಕ್ರಂದನ - ಕಿವಿಗೊಡದ ಸರ್ಕಾರ


ಮಜಾವಾಣಿ ವಿಶೇಷ ವರದಿ
ಬೆಂಗಳೂರು, ಜೂನ್ ೩೧, ೨೦೦೫
ನ್ಯೂಜರ್ಸಿಯ ಏರ್‌ಕಂಡೀಷನ್ ಅಪಾರ್ಟ್‍ಮೆಂಟುಗಳಿಂದ ಹಿಡಿದು, ಕ್ಯಾಲಿಫೋರ್ನಿಯಾದ ಮಿಲಿಯನ್ ಡಾಲರ್ ಬಂಗಲೆಗಳಲ್ಲಿ ಕೇಳಿ ಬರುವುದು ಒಂದೇ ಹೃದಯವಿದ್ರಾವಕ ಆಕ್ರಂದನ. ಕೇಳುಗರ ಕಂಗಳಲ್ಲಿ ಕಂಬನಿಯ ಕಟ್ಟೆಯೊಡೆಸುವ ಈ ಹತಭಾಗ್ಯರ ಕರುಣಾಜನಕ ಕೂಗೂ ಒಂದೇ: "ಬೆಂಗಳೂರಿನಲ್ಲಿ ಭೂಮಿಯ ಬೆಲೆ ಆಕಾಶ ಮುಟ್ಟಿದೆ"

ಉದಾಹರ್‍ಅಣೆಗೆ, ನ್ಯೂಜರ್ಸಿಯಲ್ಲಿ, ಮುಂದೆ ಯಾರಿಗೂ ಬೇಡದ ಹೂ ಗಿಡಗಳ ತೋಟ, ಮನೆಯ ಹಿಂದೆ ಹಲವು ಮಂದಿ ಈಜಾಡುವಷ್ಟು ನಿಂತಿರುವ ನೀರು, ಇಂತಹ ದುರ್ಗತಿಯ ನಡುವೆ ಇಟ್ಟಿಗೆ-ಸಿಮೆಂಟಿಗೂ ದುಡ್ಡಿಲ್ಲದೆ ಮರದಲ್ಲಿ ಕಟ್ಟಿದ ಕೇವಲ ಆರು ಬೆಡ್ ರೂಮುಗಳಿರುವ ಪುಟ್ಟ ಮನೆ. ಸಿನೆಮಾ ಹಾಲಿನಲ್ಲಿ ಪಿಕ್ಚರ್ ನೋಡಲು ಗಾಂಧಿ-ಕ್ಲಾಸ್ ಸೀಟಿಗೂ ಗತಿ ಇಲ್ಲದೆ, ಮನೆಯ ಅಡಿಪಾಯದ ಬದಲು ಮನರಂಜನಾ ಕೊಠಡಿ ಮಾಡಿಕೊಂಡಿರುವಂತಹ ನತದೃಷ್ಟರು ಈ ಮನೆಯ ಮಂದಿ. (ಮನೆಮಂದಿಯ ಆರೋಗ್ಯ ಸಹ ಅಷ್ಟಕ್ಕಷ್ಟೆ. ಬಹುಶಃ ಆಮಶಂಕೆ ಇರಬೇಕು; ಪ್ರತಿ ಕೋಣೆಗೂ ಹೊಂದಿ ಕೊಂಡಂತೆ ಬಚ್ಚಲು ಮನೆಗಳಿವೆ. ಎಂತಹ ಕಟುಕರಿಗೂ ಕರುಳು ಚುರ್ರೆನ್ನುವ ದೃಶ್ಯ.) ಇಂತಹ ದೌರ್ಭಾಗ್ಯರು ಜೀವಿಸುವ ಮನೆಯ ಒಡೆಯ ಅಕ್ಕಿನೇನಿ ಚಿರಂಜೀವಿ ರಾವು ಮೂಲತಃ ಕನ್ನಡಿಗನಲ್ಲ. ಬೆಂಗಳೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ನಾಲ್ಕು ವರ್ಷಗಳ ಎಂಜಿನಿಯರಿಂಗ್ ಕೋರ್ಸನ್ನು ಮತ್ತಷ್ಟು ಚೆನ್ನಾಗಿ ಕಲಿಯಲು, ಇನ್ನೆರ್‍ಅಡು ವರ್ಷ ಹೆಚ್ಚಿಗೆ ಓದಿದ್ದರೂ ಕನ್ನಡದ ಒಂದು ಪದವನ್ನೂ ಕಲಿತರವಲ್ಲ. ಆದರೂ ಕನ್ನಡದ ನೆಲದ ಮೇಲಿನ ಅವರ ಪ್ರೇಮ ಮಾತ್ರ ಎಂತಹ ಕನ್ನಡಿಗನ ಹೃದಯವನ್ನೂ ತಟ್ಟುವಂತಹುದು.

ಇಂತಹ ಕಿತ್ತು ತಿನ್ನುವ ಬಡತನದ ನಡುವೆಯೂ ಕನ್ನಡದ ನೆಲದ ಮೇಲಿನ ಅಭಿಮಾನವನ್ನು ಬಿಟ್ಟಿರದ ಚಿರಂಜೀವಿ ರಾವುರವರನ್ನು ನಮ್ಮ ವರದಿಗಾರರು ಸಂದರ್ಶಿಸಿದಾಗ ಅವರೆಂದ ಮಾತುಗಳು ನಮ್ಮ ಹೃದಯವನ್ನು ಮುಟ್ಟದೇ ಇರಲಿಲ್ಲ. ಅವರ ನೆಂಟರಿಷ್ಟರು ಬೆಂಗಳೂರಿನಲ್ಲಿ ಹತ್ತು ಹಲವು ಸೈಟು ಕೊಂಡಿದ್ದರೂ, ರಾವು ಕೊಂಡಿರುವುದು ಕೇವಲ ಎರಡು ಮನೆ ಮತ್ತು ಒಂದು ಸೈಟು ಮಾತ್ರ. ಅದೂ, ಇಡೀ ಸಮಾಜವೇ ತಿರಸ್ಕಾರದಿಂದ ನೋಡುವ ರಾಜಕಾರಣಿಗಳು ನೆಲೆಸಿರುವ ಸದಾಶಿವ ನಗರದಲ್ಲಿ. "ಇನ್ನೊಂದು ಸೈಟು ಖರೀದಿ ಮಾಡುವ ಯೋಚನೆ ಇದೆ, ಆದರೆ, unaffordable!" ಎಂದು ಗೋಳಿಟ್ಟರು.

"Unaffordable!", ಕ್ಯಾಲಿಫೋರ್ನಿಯಾದ ಹ್ಯಾರಿ ಭಟ್ ಅವರದೂ ಅದೇ ಆಕ್ರಂದನ. ಬೆಂಗಳೂರಿನಲ್ಲಿಯೇ ಹುಟ್ಟಿ- ಬೆಳೆದರೂ ಕನ್ನಡ ಮಾತನಾಡದ ಈ ಹುಟ್ಟು ಕನ್ನಡಿಗನ ನೋವೂ ಸಹ ಚಿರಂಜೀವಿ ರಾವುರವರ ಗೋಳಿನಂತೆಯೇ ಕರುಳು ಹಿಂಡುವಂತಹುದು. ಬಿ.ಡಿ.ಎ.ಯಿಂದ ತನ್ನ ತಂದೆ ಮತ್ತು ತಾಯಿಯ ಹೆಸರಲ್ಲಿ ಕೇವಲ ತಲಾ ಒಂದು ಮಾತ್ರ ಸೈಟು ಪಡೆದಿರುವ ಭಟ್ಟರಿಗೆ, ಮತ್ತೆರಡು ಸೈಟುಗಳನ್ನು ಖರೀದಿಸಿ ಕನ್ನಡದ ನೆಲದ ಮೇಲಿನ ಅಭಿಮಾನವನ್ನು ತೋರುವ ತವಕ. "ನನಗೆ ಈಗಾಗಲೇ ಮೂವತ್ತೆರ್‍ಅಡು ವರ್ಷ. ಮೂವತ್ತೈದಕ್ಕಿಂತ ಮುಂಚೆ ಬೆಂಗಳೂರಿನಲ್ಲಿ ಐದು ಸೈಟು ಹೊಂದುವ ಆಸೆಯಿದೆ. ನನ್ನ ಆಸೆ ಈಡೇರುವುದೋ ಇಲ್ಲವೋ..." ಎಂದು ನೋವಿನಿಂದ ನುಡಿದರು.

ಅಮೆರಿಕಂದಮ್ಮಗಳ ಇಷ್ಟೆಲ್ಲಾ ನೋವಿಗೆ ಕಾರಣವಾಗಿರುವುದು ಮುಗಿಲು ಮುಟ್ಟಿರುವ ನೆಲದ ಬೆಲೆಯಲ್ಲ; "ಡಿಮ್ಯಾಂಡ್ ಮತ್ತು ಸಪ್ಲೈ" ಎಂಬ ಆರ್ಥಿಕ ತತ್ವ. ಈ ವಿಷಯವನ್ನು ಬಿಡಿಸಿ ಹೇಳಿದ ಪಾಟಿಯಾಲಾದ ಗ್ಯಾನಿ ಜೈಲ್ ಸಿಂಗ್ ವಿ.ವಿ.ಯ ಭೂಗರ್ಭವತಿ ಡಾ.ಇಳಾ ದೇವಿಯವರು, ಮುಗಿಲು ತುಂಬಾ ಎತ್ತರದಲ್ಲಿದ್ದು, ಯಾವುದೇ ಬೆಲೆ ಅದನ್ನು ಮುಟ್ಟುವ ಸಾಧ್ಯತೆಯನ್ನು ತಳ್ಳಿ ಹಾಕಿದರು. "ಇತ್ತೀಚೆಗೆ ಕಟ್ಟಡಗಳ ಸಂಖ್ಯೆ ಜಾಸ್ತಿಯಾಗುತ್ತಿರುವುದರಿಂದ, ಖಾಲಿ ನೆಲದ ಕೊರತೆ ಉಂಟಾಗಿದೆ, ಅಷ್ಟೆ" ಎಂದರು. ಬಹಳ ಖಾಲಿ ಪ್ರದೇಶಗಳಿರುವ ರಾಜಸ್ತಾನದಿಂದ ಖಾಲಿ ನೆಲವನ್ನು ಆಮದು ಮಾಡಿಕೊಳ್ಳುವಂತೆ ತಾವು ನೀಡಿದ ಸಲಹೆಗೆ ಕರ್ನಾಟಕ ಸರ್ಕಾರ ಕಿವಿಗೊಟ್ಟಿಲ್ಲ ಎಂದೂ ತಿಳಿಸಿದರು.

1 Comments:

Anonymous Anonymous said...

ಬೆಂಗಳೂರಿನಲ್ಲಿ ಸೈಟುಗಳು ಸಿಗದೇ ಇರುವುದಕ್ಕೆ ಬರೀ ಕಟ್ಟಡಗಳ ಸಂಖ್ಯೆ ಜಾಸ್ತಿಯಾಗಿರುವುದು ಮಾತ್ರ ಕಾರಣವಲ್ಲ, ರೋಡುಗಳು ಹಾಗು ಫ್ಲೈ-ಓವರಗಳೂ ಕಾರಣ ಕೂಡ. ಘನ ಸರ್ಕಾರವು ರೋಡುಗಳನ್ನು ಸೈಟುಗಳನ್ನಾಗಿ ಪರಿವರ್ತಿಸಿ ಅಮೇರಿಕಂದಮ್ಮಗಳಿಗೆ ವಿತರಿಸಿದರೆ ಸುವರ್ಣ ಕರ್ನಾಟಕ ವರ್ಷಾಚರಣೆಯು ಅರ್ಥಗರ್ಭಿತವಾಗಿರುತ್ತದೆ.

ವಿಶ್ವಾಸಿ,

ಬೆಂಗಳೂರ ಕನ್ನಡಿಗ

March 21, 2006 6:49 AM  

Post a Comment

Links to this post:

Create a Link

<< Home