ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Sunday, January 15, 2006

"ತಿಪ್ಪಾರಳ್ಳಿ ನಾಡಗೀತೆಯಾಗಲಿ"-ದೇವೇಗೌಡ


ಮಜಾವಾಣಿ ವಾರ್ತೆ, ತಿಪ್ಪಾರಳ್ಳಿ ನವೆಂಬರ್, ೧೯, ೨೦೦೫

ತಿಪ್ಪಾರಳ್ಳಿ: ಇತ್ತೀಚೆಗಿನ ನಾಡಗೀತೆ ವಿವಾದ ತಿಳಿಯಾಗುತ್ತಿರುವಂತೆಯೇ, ಮಾಜಿ ಪ್ರಧಾನಿ ದೇವೇಗೌಡರು ನಾಡಗೀತೆಯ ಜೇನು ಗೂಡಿಗೆ ಕೈ ಹಾಕಿದ್ದಾರೆ. ಉತ್ತರ ಕೆನಡಾದ ಅಧ್ಯಕ್ಷ ಸ್ಥಾನಕ್ಕೆ ತಿಪ್ಪಾರಳ್ಳಿಯಲ್ಲಿ ನಡೆಯುತ್ತಿರುವ ಉಪಚುನಾವಣೆ ಪ್ರಚಾರಕ್ಕಾಗಿ ಆಗಮಿಸಿದ್ದ ಅವರು, ಕೈಲಾಸಂ ವಿರಚಿತ "ತಿಪ್ಪಾರಳ್ಳಿ ಬಲ್ದೂರ" ನಾಡಗೀತೆಯಾಗಲು ಎಲ್ಲಾ ಅರ್ಹತೆ ಪಡೆದಿದೆಯೆಂದರು.

ಉ.ಕೆನಡಾದ ಅಧ್ಯಕ್ಷ ಸ್ಥಾನಕ್ಕೆ ತಿಪ್ಪಾರಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿರುವ ಜೆ.ಡಿ.(ಯು) ಅಭ್ಯರ್ಥಿ ಬೋರೇಗೌಡರ ಪರವಾಗಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, "ಕುವೆಂಪು" ಮತ್ತು "ಕೈಲಾಸಂ" ನಡುವೆ ಹೆಚ್ಚಿನ ಅಕ್ಷರಗಳ ಅಂತರ ಇಲ್ಲವೆಂದು ಒತ್ತಿ ಹೇಳಿದರು.

ನಂತರ ವರದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು "ತಿಪ್ಪಾರಳ್ಳಿ" ಗೀತೆಯಲ್ಲಿ ನೈತಿಕ ಮೌಲ್ಯಗಳು, ಕನ್ನಡ ಸಂಸ್ಕೃತಿ, ಪ್ರಕೃತಿ ಪ್ರೇಮದ ಜೊತೆಗೇ ಸಾಮಾಜಿಕ ಕಾಳಜಿಯಿದೆ ಎಂದರು. ಪೌಡರ್-ಗಿವ್ಡರ್ ಹಚ್ಚಿ ಕಣ್ಣು ಮಿಟುಕಿಸಿದ ಮಹಿಳೆಯಕಡೆಗೆ ಕಣ್ಣೆತ್ತಿ ನೋಡದ ಬೋರೇಗೌಡರ ವರ್ತನೆ ಎಲ್ಲರಿಗೂ ಆದರ್ಶವಾಗಬೇಕು ಎಂದರು. ಈ ಗೀತೆಯಲ್ಲಿ ನಮ್ಮ ಸಂಸ್ಕೃತಿಯ ಪ್ರತೀಕವಾದ ದಸರಾ ಹಬ್ಬ, ಕನ್ನಡಿಗರ ಪ್ರಕೃತಿ ಪ್ರೇಮಕ್ಕೆ ಸಾಕ್ಷಿಯಾಗಿರುವ ಲಾಲ್ ಬಾಗ್ ಪ್ರಸ್ತಾಪವಾಗುವುದನ್ನು ವರದಿಗಾರರ ಗಮನಕ್ಕೆ ತಂದರು.

ನಾರಾಯಣ ಮೂರ್ತಿ ರಾಜಿನಾಮೆ

ಮಜಾವಾಣಿ ವಾರ್ತೆ ಬೆಂಗಳೂರು ನವೆಂಬರ್ ೨೦, ೨೦೦೫
ದೇವೇಗೌಡರು "ತಿಪ್ಪಾರಳ್ಳಿ" ನಾಡಗೀತೆಯಾಗಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲೇ, ಇನ್ಫ಼ೋಸಿಸ್ ಸಂಸ್ಥೆಯ ಅಧ್ಯಕ್ಷ ಬೆಂಗಳೂರು ಜಟಕಾಸ್ಟಾಂಡ್ ನಿರ್ಮಾಣ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆಯಿತ್ತಿದ್ದಾರೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬೆಂಗಳೂರು ಅಂತರರಾಷ್ಟ್ರೀಯ ಜಟಕಾಸ್ಟಾಂಡ್ ನಿರ್ಮಾಣ, ಬೆಂಗಳೂರು-ಹೈದರಾಬಾದ್ ರಸ್ತೆಯಲ್ಲಿರುವ ಹೈದರಾಬಾದ್‌‍ನಲ್ಲಿ ೧೧೦ ಎಕರೆ ಜಮೀನು ಭೂಸ್ವಾಧೀನದ ನಂತರ ಕಾರ್ಯಾರಂಭವಾಗಿರುವುದನ್ನು ಇಲ್ಲಿ ನೆನೆಪಿಸಕೊಳ್ಳಬಹುದು.

ಅವರು ರಾಷ್ಟ್ರಪತಿ ಕಲಂರವರ ಕೈಗಿತ್ತ ರಾಜೀನಾಮೆ ಪತ್ರದಲ್ಲಿ, "ತಿಪ್ಪಾರಳ್ಳಿ" ನಾಡಗೀತೆಯಾಗಬೇಕೆಂಬ ದೇವೇಗೌಡರ ಒತ್ತಾಯದ ಹಿಂದೆ, ತಮ್ಮ ತೇಜೋವಧೆ ಮಾಡುವ ಸಂಚು ಇದೆ ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ. ತಾವು ಬೆಂಗಳೂರಿನಲ್ಲಿ ಇದ್ದ ಮಾತ್ರಕ್ಕೆ, ಯಾವುದೇ ಹಳ್ಳಿ ದೂರ ಎಂಬ ಭಾವನೆ ಹೊಂದಿಲ್ಲ, ಇನ್ಫ಼ೋಸಿಸ್ ಸಂಸ್ಥೆ ಕೇವಲ ಶೇಷಾದ್ರಿಪುರ, ಜೆ.ಪಿ.ನಗರದಂತಹ ಪುರ-ನಗರಗಳಲ್ಲಿ ಮಾತ್ರವಲ್ಲ, ವಿಮಾನ ನಿಲ್ದಾಣದ ಬಳಿ ಇರುವ ಮಾರತ್‍ಹಳ್ಳಿಯಲ್ಲೂ ಭೂ-ಸ್ವಾಧೀನ ಮಾಡಿಕೊಂಡಿರುವುದನ್ನು ಅಂಕಿ-ಅಂಶಗಳ ಸಹಿತ ಒತ್ತಿ ಬರೆದಿದ್ದಾರೆ.


"ತಿಪ್ಪಾರಳ್ಳಿ ಬೇಡ": ಭಾರಿ ಪ್ರತಿಭಟನೆ

ಬೆಂಗಳೂರು (ಪಿ.ಟಿ.ಹೈ.): ತಿಪ್ಪಾರಳ್ಳಿ ನಾಡಗೀತೆಯಾಗಬೇಕೆಂಬ ಒತ್ತಾಯದ ಹಿನ್ನೆಲೆಯಲ್ಲೇ, ಅದನ್ನು ವಿರೋಧಿಸಿ ಆಂದೋಲನ ಆರಂಭವಾಗಿದೆ. ಇಂದು ಬೆಂಗಳೂರಿನಲ್ಲಿ ನಡೆದ ಭಾರಿ ಪ್ರತಿಭಟನೆಯಲ್ಲಿ ಸಹಸ್ರಾರು ಮಂದಿ ಭಾಗವಹಿಸಿದ್ದರು.

ತಮ್ಮ ಪಂಗಡವನ್ನು ಅವಹೇಳನ ಮಾಡುವ ಈ ಗೀತೆಯನ್ನು ನಾಡಗೀತೆಯಾಗಿ ಮಾಡಿದರೆ, ಬಳೇಪೇಟೆಯಲ್ಲಿ ರಾಜ್ಯಾದ್ಯಂತ ಆಂದೋಲನ ಮಾಡುವುದಾಗಿ ಅಖಿಲ ಕಣ್ಣಾಟಕ ಕಣ್ಣು ಮಿಟುಕಿಸುವವರ ಸಂಘದ ಅಧ್ಯಕ್ಷ ಹಿರೇಮಗಳೂರು ಕಣ್ಣನ್ ಮತ್ತು ಕಾರ್ಯದರ್ಶಿ ಮಲಿನಾಕ್ಷಿ ಎಚ್ಚರಿಕೆ ನೀಡಿದ್ದಾರೆ. "ಕಣ್ಣು ಮಿಟುಕಿಸುವುದು ಒಂದು ಸಹಜ ಪ್ರಕ್ರಿಯೆ, ಅದನ್ನು ಗೇಲಿ ಮಾಡುವ ಈ ಪದ್ಯ ಇಡೀ ಮಾನವ ಜನಾಂಗವನ್ನೇ ಅಪಹಾಸ್ಯಕ್ಕೆ ಗುರಿಮಾಡುತ್ತದೆ" ಎಂದು ತಮ್ಮ ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

Labels:

0 Comments:

Post a Comment

Links to this post:

Create a Link

<< Home