ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Sunday, January 15, 2006

ಕಳ್ಳನ ಬಂಧನ, ಎಲ್ಲೆಡೆ ನೆಮ್ಮದಿಯ ನಿಟ್ಟುಸಿರು


ಜೆ.ಎಂ.ಎಸ್.ಪಾಂಡು, ಮಜಾವಾಣಿ ಕ್ರಿಮಿನಲ್ ವರದಿಗಾರ
ಬೆಂಗಳೂರು, ಏಪ್ರಿಲ್ ೩೧, ೨೦೦೫: ಕೊನೆಗೂ ಎಲ್ಲೆಡೆ ಸಮಾಧಾನದ ನಿಟ್ಟುಸಿರು! ಹಲವಾರು ವರ್ಷಗಳಿಂದ ಕರ್ನಾಟಕದ ಎಲ್ಲೆಡೆ ಅವನ ಹೆಸರು ಹೇಳಿದೊಡನೆಯೇ ಜನರು ಹೆಗಲು ಮುಟ್ಟಿಕೊಳ್ಳುವಂತೆ ಮಾಡಿದ್ದ ಕಳ್ಳನನ್ನು ಪೋಲೀಸರು ಕಡೆಗೂ ಬಂಧಿಸಿದ್ದಾರೆ. ಈ ವಿಷಯವನ್ನು ಪೋಲೀಸ್ ಕಮೀಷನರ್ ಸಾಂಗ್ಲಿಯಾನ ತಮ್ಮ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ಕರ್ನಾಟಕ ಮಾತ್ರವಲ್ಲದೇ, ದೇಶ ವಿದೇಶಗಳಲ್ಲೂ ಅನೇಕ ವರ್ಷಗಳಿಂದ ಅವ್ಯಾಹತವಾಗಿ ನಡೆಯುತ್ತಿದ್ದ ಈ ಅಪರಾಧವನ್ನು ತಡೆಗಟ್ಟಿ ಅಪರಾಧಿಯನ್ನು ಬಂಧಿಸಲು ನಗರ್ತಪೇಟೆ ಪೋಲೀಸ್ ಠಾಣೆಯ ದಫ಼ೇದಾರ್ ದೇರಣ್ಣನವರ ನೇತೃತ್ವದಲ್ಲಿ ಇಂಟರ್‌ಪೋಲ್ ನೆರವಿನೊಂದಿಗೆ ಅಂತರರಾಷ್ಟ್ರೀಯ ತಂಡವೊಂದನ್ನು ರಚಿಸಲಾಗಿತ್ತು. ಅಪರಾಧಿ ತಪ್ಪಿಸಿಕೊಂಡು ಹೋಗುತ್ತಿರುವಾಗ, ದೇರಣ್ಣನವರು ಅತಿ ಸಾಹಸದಿಂದ ಅಪರಾಧಿಯ ವಾಹನವನ್ನು ಅಡ್ಡಗಟ್ಟಿ ವಾಹನದ ಸಮೇತ ಅಪರಾಧಿಯನ್ನು ಹಿಡಿದರೆನ್ನಲಾಗಿದೆ.

ಬೆಳಗೆರೆ ಸಂಶಯ: ಕರ್ನಾಟಕದ ಎಲ್ಲ ಕಡೆಗೂ ತಮ್ಮ ಕ್ರೈಮ್ ಡೇರಿಯ ಮೂಲಕ ಬೆಣ್ಣೆ-ಬಿಸ್ಕತ್ತು ಸರಬರಾಜು ಮಾಡುತ್ತಿರುವ ಕವಿ ಬೆಳಗೆರೆಯವರು, ಪೋಲೀಸರ ಈ ಸಾಧನೆಯ ಬಗೆಗೆ ತಮ್ಮ ಸಂದೇಹ ವ್ಯಕ್ತಪಡಿಸಿದ್ದಾರೆ. ಅಪರಾಧದಲ್ಲಿ ಆಳವಾದ ಅಧ್ಯಯನ ನಡೆಸಿರುವ ಬೆಳಗೆರೆಯವರು, ಈ ವರದಿಗಾರನೊಂದಿಗೆ ಮಾತನಾಡುತ್ತಾ "ಎಷ್ಟೋ ಬಾರಿ ಈ ಅಪರಾಧ ಕೆಂಗೇರಿಯಿಂದ ಹಂಗೇರಿಯವರೆಗೆ ದೂರ್‍ಅದೂರುಗಳಲ್ಲಿ ಒಮ್ಮೆಗೇ ನಡೆದಿದೆ. ಒಬ್ಬನೇ ಕಳ್ಳ ಇವುಗಳನ್ನೆಲ್ಲಾ ಮಾಡಿದ್ದಾನೆಂದರೆ ನಂಬುವುದು ಕಷ್ಟ" ಎಂದರು. ಮುಂದುವರೆಯುತ್ತಾ, "ಕನ್ನಡಿಗರು ಎಚ್ಚರಿಕೆಯಿಂದಿದ್ದು, ಹೆಗಲು ಮುಟ್ಟಿಕೊಳ್ಳುವುದನ್ನು ನಿಲ್ಲಿಸಬಾರದು" ಎಂದು ಉಚಿತ ಸಲಹೆ ನೀಡಿದರು.

Labels:

0 Comments:

Post a Comment

Links to this post:

Create a Link

<< Home