ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Monday, January 30, 2006

ಮಜಾವಾಣಿ ಹೊಸ ಅಂಕಣ: ಮಜಾವಾಣಿ ಮಹನೀಯರು

ಸತ್ಯದ ವಿರುದ್ಧ ಯಾವುದೇ ಮುಚ್ಚು ಮರೆ ಇಲ್ಲದೇ ಸಮರ ಸಾರಿರುವುದು ನಮ್ಮ ಪತ್ರಿಕೆಯ ಹೆಗ್ಗಳಿಕೆಯಾದರೂ, ಈ ಸಮರದಲ್ಲಿ ನಮಗಿಂತಲೂ ಬಹಳ ಹಿಂದಿನಿಂದಲೇ ಹಲವಾರು ಮಹಾನ್ ಯೋಧರು ಭಾಗವಹಿಸಿದ್ದಾರೆ.

"ಸತ್ಯ" ಎಂಬುದು ಅತಿ ಅಪಾಯಕಾರಿ ದೌರ್ಬಲ್ಯ. ಗಾಂಧಿಯಂತಹ ಮಹಾತ್ಮನಿಗೂ ಕೂಡ ಈ ವ್ಯಸನದಿಂದ ಹೊರ ಬರಲು ಸಾಧ್ಯವಾಗಲಿಲ್ಲ. ಗಾಂಧಿಗಿಂತ ಬಹಳ ಹಿಂದೆ, ಹರಿಶ್ಚಂದ್ರನೆಂಬ ದುರ್ಬಲ ವ್ಯಕ್ತಿ ಮಹಾರಾಜನಾಗಿದ್ದರೂ ಈ ಚಟದ ದಾಸನಾಗಿ, ರಾಜ್ಯ, ಪತ್ನಿ ಮತ್ತು ಪುತ್ರನನ್ನು ಕಳೆದುಕೊಂಡು "ಗಾಂಜಾ" ಮಂಜು, "ಹೆರಾಯಿನ್"ಹರಿಯಣ್ಣ. "ಕೊಕೇನ್"ಕಿಟ್ಟರಂತೆ, ಇತಿಹಾಸದಲ್ಲಿ "ಸತ್ಯ"ಹರಿಶ್ಚಂದ್ರ ಎಂದೇ ಗುರುತಿಸುವಂತಹವನಾದ.

ಇಂತಹ ಅಪಾಯಕಾರಿ ವ್ಯಸನಕ್ಕೆ ಗುರಿಯಾಗದೆ, ಈ ಮಾದಕ ಮೌಲ್ಯದ ವಿರುದ್ಧ ಪತ್ರಿಕೋದ್ಯಮದ ಮೂಲಕ ಕದನ ಹೂಡಿದ ವೀರ ಯೋಧರ ಕತೆಗಳು ಅಧ್ಬುತ ಮತ್ತು ರೋಚಕ. ಆದರೆ, ದುರದೃಷ್ಟವಶಾತ್ ಈ ಮಹಾನ್ ಯೋಧರ ಬಲಿದಾನ ಬಹಳ ಮಂದಿಗೆ ತಿಳಿದಂತಿಲ್ಲ.

ಸತ್ಯದ ಕಹಿಯನ್ನು ಕಡಿಮೆ ಮಾಡಲು ಕದನ ಹೂಡಿದ ಈ ಕಲಿಗಳ ರೋಚಕ ಗಾಥೆಯನ್ನು ಓದುಗರಿಗೆ ನೀಡಲು ನಮ್ಮ ಪತ್ರಿಕೆ ನಿರ್ಧರಿಸಿದೆ. ಈ ಸಲುವಾಗಿ ನಾವು "ಮಜಾವಾಣಿ ಮಹನೀಯರು" ಎಂಬ ಹೊಸ ಅಂಕಣವನ್ನು ಪ್ರಾರಂಭಿಸುತ್ತಿದ್ದೇವೆ.

ಈ ಅಂಕಣದ ಮಾಲೆಯ ಮೊದಲಿನ ಕೆಲ ಲೇಖನಗಳಲ್ಲಿ ಕರ್ನಾಟಕದ ಮತ್ತು ಭಾರತದ ಹೊರಗೆ ನಿಸ್ಸ್ವಾರ್ಥಸೇವೆ ಸಲ್ಲಿಸಿರುವ ಮತ್ತು ಸಲ್ಲಿಸುತ್ತಿರುವ ಕೆಲ ಮಂದಿಯ ಪರಿಚಯಿಸಿ, ಅನಂತರ ಭಾರತದ, ಕರ್ನಾಟಕದ ವೀರಾಗ್ರಣಿಗಳ ಕತೆಗಳನ್ನು ಕೈಗೆತ್ತುಕೊಳ್ಳಲಿದ್ದೇವೆ.

ಓದುಗರಲ್ಲೊಂದು ಮನವಿ: ಸತ್ಯದಂತಹ ಜನಪ್ರಿಯ ಮೌಲ್ಯದ ವಿರುದ್ಧ ಸಮರಸಾರುವುದು ಅತಿ ಅಪಾಯಕಾರಿ ವಿಷಯ. ಇದು ನಮ್ಮ ಪತ್ರಿಕೆಯೊಂದರಿಂದ ಮಾತ್ರ ಸಾಧ್ಯವಾಗುವಂತಹುದಲ್ಲ. ಹೀಗಾಗಿ, ಈ ವಿಷಯದಲ್ಲಿ ನಮ್ಮ ಓದುಗರಿಂದ ಬೇಡುವುದಿಷ್ಟೇ: ಜಾಗೃತಿ ಮತ್ತು ಸಹಕಾರ

ನೀವು ದಿನ ಪತ್ರಿಕೆಯನ್ನೋ ನಿಯತಕಾಲಿಕೆಗಳನ್ನೋ ಓದುವಾಗ ಸತ್ಯದ ವಿರುದ್ಧ ಸಮರ ಹೂಡಿರುವುದು ಕಂಡಲ್ಲಿ ದಯವಿಟ್ಟು ನಮ್ಮ ಪತ್ರಿಕೆಯ ಗಮನಕ್ಕೆ ತನ್ನಿ. ನಮ್ಮ ವಿಳಾಸ:

vaarta.vidooshaka at gmail.com

..
ಸಂಪಾದಕ

Thursday, January 26, 2006

"ಶಾಸ್ತ್ರಿಯ ಭಾಷೆ ಸ್ಥಾನಮಾನ" ವಿವಾದಕ್ಕೆ ಹೊಸ ತಿರುವುಕನ್ನಡಕ್ಕೆ ಶಾಸ್ತ್ರಿಯ ಭಾಷೆ ಸ್ಥಾನಮಾನದ ವಿಚಾರದಲ್ಲಿ ರವಿ ಶಾಸ್ತ್ರಿಯವರು ದಿಗ್ಭ್ರಾಂತಿ ವ್ಯಕ್ತಪಡಿಸಿದ ಹಿನ್ನೆಲೆಯಲ್ಲೇ, ಈ ವಿವಾದಕ್ಕೆ ಹೊಸ ತಿರುವು ಬಂದಿದೆ.

ನಮ್ಮ ಪತ್ರಿಕೆಯ ವಿಶೇಷ ಬಾತ್ಮೀದಾರರಾದ "ವಾಯುಪುತ್ರ"ರವರು, ಅತಿ ಮಹತ್ವದ ವಿಷಯವೊಂದನ್ನು ಹೊರಗೆಡವಿದ್ದಾರೆ. ಬೆಂಗಳೂರಿನ ಸಜ್ಜನರಾಯರ ವೃತ್ತದ ಬಳಿ ಟೋಪಿ ಧರಿಸಿದ ಹಲವು ವ್ಯಕ್ತಿಗಳು ಕೊಟ್ಟ ಒಳ ಸುಳಿವುಗಳ ಪ್ರಕಾರ "ಇದು ರವಿ ಶಾಸ್ತ್ರಿಯ ಭಾಷೆಯ ಪ್ರಶ್ನೆಯಲ್ಲ, ವಿನಿವಿಂಕ್ ಶಾಸ್ತ್ರಿಯ ಭಾಷೆಯ ಪ್ರಶ್ನೆ".

ರವಿ ಶಾಸ್ತ್ರಿಯ ಕಡೆಗೆ ಕೈ ತೋರಿಸಿ, ವಿಶ್ವಾದ್ಯಂತ ಇರುವ ನಮ್ಮ ಪತ್ರಿಕೆಯ ಮೂರು ಜನ ಓದುಗರನ್ನು ಹಾದಿ ತಪ್ಪಿಸುವ ವಿನಿವಿಂಕ್ ಶಾಸ್ತ್ರಿಯವರ ಪ್ರಯತ್ನ ವಾಯುಪುತ್ರರವರ ವರದಿಯ ಫಲವಾಗಿ ಪೂರ್ಣ ವಿಫಲಗೊಂಡಿದೆ.

ಈ ವಿಚಾರದ ಕುರಿತು ವಿನಿವಿಂಕ್ ಶಾಸ್ತ್ರಿಯವರನ್ನು ಸಂದರ್ಶಿಸಿ ಮತ್ತಷ್ಟು ತನಿಖೆ ನಡೆಸುವ ನಮ್ಮ ಯತ್ನ ಸಫಲವಾಗಲಿಲ್ಲ. ಕಳೆದ ಬಾರಿ ಜೈಲಿನಿಂದ ಬಿಡುಗಡೆಯಾದಾಗ, "ಇದೇ ಕಡೆಯ ಬಾರಿ, ಮತ್ತೊಮ್ಮೆ ಒಳ ಬಂದರೆ, ಹೊರಗೆ ಬಿಡುವುದಿಲ್ಲ" ಎಂದು ಜೈಲರ್ ನೀಡಿದ್ದ ಎಚ್ಚರಿಕೆ ಜ್ಞಾಪಕಕ್ಕೆ ಬಂದದ್ದರಿಂದ ನಮ್ಮ ಮುಖ್ಯ ವರದಿಗಾರ ಹಿಂದಿರುಗಬೇಕಾಯಿತು.

ನಮ್ಮ ತನಿಖಾ ವರದಿಗಾರರು ಗೂಗಲ್ ಎಂಬ ಅತ್ಯಾಧುನಿಕ ಮತ್ತು ರಹಸ್ಯ ತಂತ್ರಜ್ಞಾನದ ಸಹಾಯದಿಂದ ತನಿಖೆನಡೆಸಿದಾಗ ತಿಳಿದು ಬಂದ ಇನ್ನೊಂದು ವಿಷಯವೆಂದರೆ - ರವಿ ಶಾಸ್ತ್ರಿ ಹುಟ್ಟಿ ಬೆಳೆದದ್ದು ಮುಂಬಯಿಯಲ್ಲಿ ಆದರೂ, ಆತನ ಪೂರ್ವಿಕರು ಕರ್ನಾಟಕದ ಮಂಗಳೂರಿನವರು.

ಈ ವಿಷಯ ತಿಳಿಯದೆ ರವಿ ಶಾಸ್ತ್ರಿಯವರ ಮೇಲೆ ಆರೋಪ ಹೊರಿಸಿದ್ದಕ್ಕಾಗಿ ನಮ್ಮ ಪತ್ರಿಕೆ ಶಾಸ್ತ್ರಿಯವರ ಹಳೆಯ ಗೆಳತಿ ಅಮೃತಾ ಸಿಂಗ್‌ರವರಲ್ಲಿ ಕ್ಷಮೆ ಬೇಡುತ್ತದೆ.

Monday, January 23, 2006

ಶಾಸ್ತ್ರಿ ದಿಗ್ಭ್ರಾಂತಿ


ಮುಂಬೈ, ಜನವರಿ ೨೩, ೨೦೦೬: ತಮಿಳರು ೬ ವರ್ಷಗಳ ಸತತ ಲಾಬಿ ನಡೆಸಿ ಈ ಸ್ಥಾನ-ಮಾನ ಪಡೆದುಕೊಂಡದ್ದಾಗಿದೆ. ಈ ಕುರಿತು ಕನ್ನಡದ ಪತ್ರಿಕೆಗಳಲ್ಲಿ ಬಿಸಿ ಚರ್ಚೆ ನಡೆಯುತ್ತಲೂ ಇದೆ. ಕನ್ನಡ ಸಾಹಿತ್ಯದ ದಿಗ್ಗಜಗಳೆನಿಸಿಕೊಂಡವರು ಮದಗಜಗಳಂತೆ ಹೊಡೆದಾಡಿದ್ದೂ ಆಗಿದೆ. ಆದರೆ, ಇಷ್ಟೆಲ್ಲಾ ನಡೆಯುತ್ತಿದ್ದರೂ, ರವಿ ಶಾಸ್ತ್ರಿ ಮಾತ್ರ ನಿರ್ಲಿಪ್ತ.

"ಕನ್ನಡ ಮತ್ತು ತಮಿಳು, ಇವೆರಡರಲ್ಲಿ ಯಾವೊಂದೂ ತಮ್ಮ ಭಾಷೆಯಲ್ಲ" ಎಂದ ಶಾಸ್ತ್ರಿಯವರು, ತಮಿಳಿಗೆ "ಶಾಸ್ತ್ರಿಯ ಭಾಷೆ" ಸ್ಥಾನಮಾನ ದೊರಕಿರುವುದು ತಮಗೆ ತಿಳಿದೇ ಇಲ್ಲ ಮತ್ತು ಕನ್ನಡದಲ್ಲಿ ಈ ಕುರಿತು ಬಿಸಿ ಚರ್ಚೆಯಾಗುತ್ತಿರುವುದು ತಿಳಿದು ತಮಗೆ ಸಂಪೂರ್ಣ ದಿಗ್ಭ್ರಾಂತಿಯಾಗಿದೆ ಎಂದರು.

ಇಷ್ಟೆಲ್ಲಾ ಚರ್ಚೆ ನಡೆಯುತ್ತಿದ್ದರೂ ಇತರೆ ಪತ್ರಿಕೆಗಳು ತಮ್ಮನ್ನು ಸಂಪರ್ಕಿಸದಿದ್ದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ ಅವರು, "ಈ ವಿಷಯದ ಕುರಿತು ನನ್ನನ್ನು ಸಂಪರ್ಕಿಸಿದ ಪ್ರಥಮ ಪತ್ರಿಕೆ ಮಜಾವಾಣಿ" ಎಂದು ನಮ್ಮ ಪತ್ರಿಕೆಯನ್ನು ಪ್ರಶಂಸಿದರು.

Sunday, January 22, 2006

ಮಜಾವಾಣಿ ವಿಶೇಷ ಅಂಕಣಆತ ಮಂಗಗಳ ಗ್ರಹದಿಂದ, ಈತನೂ.. ಮಂಗಗಳ ಗ್ರಹದಿಂದ

ಪ್ರಿಯ ಓದುಗರೇ, ಗಂಡ ಹೆಂಡಿರ ನಡುವಿನ ದೈನಂದಿನ ಸಮಸ್ಯೆಗಳ ಬಗ್ಗೆ ಅಮೆರಿಕದ ಜಾನ್ ಗ್ರೇ ಅವರು ಬರೆದಿರುವ ಪುಸ್ತಕ ಈಗ ಕನ್ನಡವನ್ನೂ ತಲುಪಿ ನಮ್ಮ ಪ್ರತಿಸ್ಪರ್ಧಿಯಾದ ದಟ್ಸ್ ಕನ್ನಡ ಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವುದು ನಿಮಗೆಲ್ಲರಿಗೂ ತಿಳಿದಿರಬಹುದು. ನಮ್ಮ ದೃಷ್ಟಿಯಲ್ಲಿ, "ಗಂಡ ಹೆಂಡಿರ ಜಗಳ ಉಂಡು ಮಲಗುವವರೆಗೆ" ಮಾತ್ರ. ಇಬ್ಬರೂ ಮಲಗಿದ ಮೇಲಂತೂ, ಜಗಳಕ್ಕೆ ಪೂರ್ಣ ವಿರಾಮ - ಎದ್ದ ನಂತರ ಜಗಳ ಮತ್ತೆ ಮುಂದುವರೆಸುವವರೆಗೆ. ನಮ್ಮ ದೃಷ್ಟಿಯಲ್ಲಿ ಇಂತಹ ಕ್ಷುಲ್ಲಕ ವಿಚಾರಕ್ಕೆ ಪುಸ್ತಕ ಬರೆಯುವ ಅಥವಾ ಓದುವ ಅವಶ್ಯಕತೆ ಇಲ್ಲ.

ಆದರೆ, ಗಂಡು - ಗಂಡುಗಳ ನಡುವಿನ ಸಂಬಂಧ ಹಳಸಿದರೆ, ಗಂಡಾಂತರ ಕಾದಿದೆ ಎಂದೇ ಅರ್ಥ. ಉದಾಹರಣೆಗೆ ಅಮೆರಿಕದ ಅಧ್ಯಕ್ಷ ಬುಶ್ ಮತ್ತು ಇರಾಕಿನ ಮಾಜಿ ಸರ್ವಾಧಿಕಾರಿ ಸದ್ದಾಮ್ ಹುಸೇನರ ನಡುವಿನ ಜಗಳ ಇಬ್ಬರೂ ಹಲವಾರು ಬಾರಿ ಉಂಡು ಮಲಗಿದ್ದರೂ, ಮುಕ್ತಾಯವಾಗುವ ಯಾವುದೇ ಚಿಹ್ನೆಗಳು ಕಾಣುತ್ತಿಲ್ಲ. ಜೊತೆಗೇ ಈ ಗಂಡು-ಗಂಡುಗಳ ಜಗಳದ ಮಧ್ಯೆ ಹ್ಯಾಲಿಬರ್ಟನ್ ಶ್ರೀಮಂತವಾಯ್ತು ಎನ್ನುವಂತೆ, ಇಂಥಹ ಜಗಳಗಳು ಜಾಗತಿಕ ವ್ಯವಹಾರದ ಮೇಲೆ ಪರಿಣಾಮ ಬೀರುತ್ತವೆ.

ಇಡೀ ಜಗತ್ತಿನ ಅಳಿವಿಗೇ ಮುಖ್ಯವಾದ ಗಂಡು-ಗಂಡುಗಳ ನಡುವಿನ ಸಂಬಂಧಗಳ ಮೇಲೆ ಬೆಳಕು ಚೆಲ್ಲುವ ಚಾರ್ಲ್‌ಟನ್ ಹೆಸ್ಟನ್ ರವರ "ಆತ ಮಂಗಗಳ ಗ್ರಹದಿಂದ, ಈತನೂ.. ಮಂಗಗಳ ಗ್ರಹದಿಂದ" ಪುಸ್ತಕದ ಕನ್ನಡ ಅನುವಾದವನ್ನು ಪ್ರಕಟಿಸಲು ನಮ್ಮ ಪತ್ರಿಕೆ ನಿರ್ಧರಿಸಿದೆ.

ಎಲ್ಲರಿಗೂ ತಿಳಿದಂತೆ ಗಂಡಸರು ಮಂಗಳ ಗ್ರಹದಿಂದ ಬಂದರೆನ್ನುವುದು, ಹೆಂಗಸರು ಶುಕ್ರ ಗ್ರಹದಿಂದ ಬಂದರೆನ್ನುವುದೂ "ಡಾ." ಜಾನ್ ಗ್ರೇ ಪಡೆದಿರುವ ಡಾಕ್ಟರೇಟ್ ತರಹವೇ ಅನುಮಾನಾಸ್ಪದ.

ಆದರೆ, ಮಂಗಗಳ ಗ್ರಹ ಆ ರೀತಿಯ ಕಾಲ್ಪನಿಕ ಸೃಷ್ಟಿಯಲ್ಲ. ಇದಕ್ಕೆ ಸಾಕ್ಷ್ಯಾಧಾರ ಪೂರಕವಾಗಿ ಪ್ಲಾನೆಟ್ ಆಫ್ ದಿ ಏಪ್ಸ್ (೧೯೬೮) ಮತ್ತು ಪ್ಲಾನೆಟ್ ಆಫ್ ದಿ ಏಪ್ಸ್ (೨೦೦೧) ಎಂಬ ಎರಡು ವೈಜ್ಞಾನಿಕ ಡಾಕ್ಯುಮೆಂಟರಿ ಚಿತ್ರಗಳು ಸಹ ಇವೆ.

ಲೇಖಕ ಚಾರ್ಲ್‍ಟನ್ ಹೆಸ್ಟನ್ ,"ಡಾ."ಜಾನ್ ಗ್ರೇಯಂತೆ ಖೋಟಾ ಡಾಕ್ಟರೇಟ್ ಪಡೆದಿಲ್ಲವಾದರೂ, ಈಗಾಗಲೇ ಎರಡು ಬಾರಿ ಮಂಗಗಳ ಗ್ರಹಕ್ಕೆ ಪ್ರಯಾಣಮಾಡಿ ಆ ಗ್ರಹದ ನಿವಾಸಿಗಳ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದಾರೆ. ಮಂಗಗಳಿಂದಲೇ ಮಾನವರೆನ್ನುವ ವೈಜ್ಞಾನಿಕ ಸತ್ಯ ಸರ್ವವಿದಿತವಾಗಿರುವಾಗ, ಗಂಡು-ಗಂಡುಗಳ ನಡುವೆ ವಿರಸ ಹೇಗೆ ಏರ್ಪಡುತ್ತದೆ, ಆ ರೀತಿಯ ವಿರಸ ಉಂಟಾದಾಗ ನಿವಾರಿಸುವ ಉಪಾಯಗಳು ಯಾವುವು ಎಂಬುದನ್ನು ಹೆಸ್ಟನ್ನರು ತಮ್ಮ ಪಾಂಡಿತ್ಯ ಮತ್ತು ಅನುಭವ ಪೂರ್ಣ ಪುಸ್ತಕದಲ್ಲಿ ವಿವರಿಸಿದ್ದಾರೆ.

ಚಾರ್ಲ್‌ಟನ್ ಹೆಸ್ಟನ್ನರ ಈ ಅಪರೂಪದ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದವರು ಕೆಂಗಲ್ ಹನುಮಂತಯ್ಯ. ಹಲವು ವರ್ಷಗಳ ಹಿಂದೆಯೇ ಒಂದೆಡೆಯಿಂದ ಇನ್ನೊಂದೆಡೆಗೆ ಚಂಗನೆ ನೆಗೆಯಲು ಸಾಧ್ಯವಾಗುವಂತೆ ಬೆಂಗಳೂರಿನಲ್ಲಿ ಮೃಗಾಲಯವೊಂದನ್ನು ಸ್ಥಾಪಿಸಿ ಶ್ರೀಯುತರು ಮಂಗಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ವಾರದಿಂದ ವಾರಕ್ಕೆ ನೀವು ಇಲ್ಲಿ ಕಲಿಯಲಿರುವ ಮತ್ತು ಅರಿಯಲಿರುವ ಮಹತ್ವದ ಸಂಗತಿಗಳು ಹತ್ತಾರು. ಇಲ್ಲಿನ ಒಳನೋಟಗಳು ನಿಮ್ಮ ಆಸಕ್ತಿಯನ್ನು ಹೆಚ್ಚಿಸಬಹುದು ಎಂಬುದು ನಮ್ಮ ನಂಬಿಕೆ.

ಸದ್ಯದಲ್ಲೇ ನಿರೀಕ್ಷಿಸಿ, ಚಾರ್ಲಟನ್ ಹೆಸ್ಟನ್ನರ "ಆತ ಮಂಗಗಳ ಗ್ರಹದಿಂದ.. ಈತನೂ.. ಮಂಗಗಳ ಗ್ರಹದಿಂದ"
-ಸಂಪಾದಕ

Thursday, January 19, 2006

ಮಜಾವಾಣಿ ತನಿಖಾ ವರದಿ


[ಇಂದು ಪತ್ರಿಕೋದ್ಯಮದಲ್ಲಿ, ಪ್ರಭಾವಿ ರಾಜಕಾರಣಿಗಳ, ಅಧಿಕಾರಿಗಳ, ಗಣ್ಯವ್ಯಕ್ತಿಗಳ, ಮಠಾಧಿಪತಿಗಳ ಮುಚ್ಚಿಟ್ಟ ತಪ್ಪುಗಳನ್ನು ಹೊರಗೆಳೆಯುವುದು "ತನಿಖಾ ವರದಿ" ಎಂಬ ತಪ್ಪು ಅಭಿಪ್ರಾಯವಿದೆ. ಉದಾಹರ್‍ಅಣೆಗೆ, ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕೆಯ ರೀಟು ಸರೀನ್‍ರವರು ಬರೆದಿರುವ ಈ ಲೇಖನದಲ್ಲಿ, ರಾಜಕೀಯ ನಾಯಕರು, ಹಿರಿಯ ಅಧಿಕಾರಿಗಳು, ಶ್ರೀಮಂತ ಉದ್ಯಮಿಗಳು ಇತ್ಯಾದಿ ಅಲ್ಪಸಂಖ್ಯಾತರು ಮಾಡಿರಬಹುದಾದ ತಪ್ಪುಗಳ ವಿಚಾರವಿದೆಯೇ ಹೊರತು, ನಮ್ಮ ಸಮಾಜದಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಜನ-ಸಾಮಾನ್ಯರ ವಿಚಾರವೇ ಇಲ್ಲ.

ನಮ್ಮ ಪತ್ರಿಕೆ ಅಲ್ಪಸಂಖ್ಯಾತರ ಮೇಲಿನ ಈ ದಬ್ಬಾಳಿಕೆಯನ್ನು ಯಾವುದೇ ಮುಲಾಜಿಲ್ಲದೆ ಖಂಡಿಸುತ್ತದೆ.

ಅಲ್ಪಸಂಖ್ಯಾತರ ಮನ ನೋಯಿಸುವ ಇಂತಹ "ತನಿಖಾ ವರದಿಗಳ" ವಿರುದ್ಧ ನಮ್ಮ ಪತ್ರಿಕೆ ವ್ಯವಸ್ಥಿತ ಹೋರಾಟ ನಡೆಸಲು ಸಿದ್ಧವಾಗಿದೆ. ಈ ದಿಸೆಯಲ್ಲಿ, "ಮಜಾವಾಣಿ ತನಿಖಾ ವರದಿ" ಎಂಬ ಅಂಕಣವನ್ನು ವಾರಕ್ಕೊಮ್ಮೆ ಆಗಾಗ್ಗೆ ಪ್ರಕಟಿಸಲು ನಿಶ್ಚಯಿಸಿದ್ದೇವೆ.

ಈ ಅಂಕಣ ಮಾಲೆಯ ಮೂಲ ಉದ್ದೇಶ ಸಮಾಜದ ಗಣ್ಯರ, ಪ್ರಭಾವಿ ವ್ಯಕ್ತಿಗಳ ಒಳ್ಳೆಯತನವನ್ನು ಬಯಲಿಗೆಳೆಯುವುದು. ಇದರ ಜೊತೆಗೇ, ನಮ್ಮ ಪತ್ರಿಕೆಯೊಂದನ್ನು ಬಿಟ್ಟು ಉಳಿದೆಲ್ಲಾ ಪತ್ರಿಕೆಗಳವರನ್ನೂ ಮರಳು ಮಾಡಿ ತನ್ನ ಬುಟ್ಟಿಗೆ ಹಾಕಿಕೊಂಡಿರುವ ಜನ-ಸಾಮಾನ್ಯರ ಬಂಡವಾಳವನ್ನು ಬರಿದು ಮಾಡುವುದೂ ಆಗಿದೆ. - ಸಂಪಾದಕ]


ಹೊರ ರಾಜ್ಯಗಳಲ್ಲಿ ಕನ್ನಡ ಬೆಳೆಸಲು ಸರ್ಕಾರದಿಂದ ಐದು ಅಂಶಗಳ ಕಾರ್ಯಕ್ರಮ

ಕನ್ನಡಿಗರ ಜಡತನ ಅಂತಹ ಹೊಸ ವಿಚಾರವೇನೂ ಅಲ್ಲ. ಈ ವಿಷಯದ ಕುರಿತು ಹಲವಾರು ಪಾಂಡಿತ್ಯ ಪೂರ್ಣ ಸಂಶೋಧನಾ ವರದಿಗಳು ಈಗಾಗಲೇ ಪ್ರಕಟವಾಗಿವೆ.

ಈ ಜಡತನದಿಂದ ಕನ್ನಡಿಗರು, ಅನ್ಯ ಭಾಷಸ್ತರಿಗೆ ಹೋಲಿಸಿದರೆ ತಮ್ಮ ಸ್ವಸ್ಥಾನದಿಂದ ಕದಲಲೊಲ್ಲರು. ಹೀಗಾಗಿ ಕರ್ನಾಟಕದಲ್ಲಿ ಅನ್ಯ ಭಾಷಿಗರ ಸಂಖ್ಯೆ ಹೆಚ್ಚಾದಂತೆ ನೆರೆ ರಾಜ್ಯಗಳಲ್ಲಿ ಕನ್ನಡಿಗರ ಸಂಖ್ಯೆ ಮಾತ್ರ ಬೆಳೆಯುತ್ತಿಲ್ಲ.

ಈ ಪರಿಸ್ಥಿತಿ ಒಟ್ಟಾರೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮೇಲೆ ಪರಿಣಾಮ ಬೀರಿದೆಯಾದರೂ, ಇದರಿಂದ ಮುಖ್ಯವಾಗಿ ಹೊಡೆತ ತಿಂದಿರುವುದೆಂದರೆ ಕನ್ನಡ ಚಿತ್ರರಂಗ. ಕರ್ನಾಟಕದಲ್ಲಿಯೇ ಯಾರೂ ನೋಡದ ಚಿತ್ರಗಳನ್ನು ಹೊರ ನಾಡುಗಳಿಗೆ ಕಳುಹಿಸುವ ಕನ್ನಡ ಚಿತ್ರ ನಿರ್ಮಾಪಕರ ಆಲೋಚನೆ ಈ ಪರಿಸ್ಥಿತಿಯಿಂದಾಗಿ ಮಣ್ಣು ಪಾಲಾಗಿದೆ.

ಇವೆಲ್ಲಾ ಹೊಸ ವಿಷಯಗಳೇನೂ ಅಲ್ಲ.

ಹೊಸ ವಿಷಯವೆಂದರೆ, ಇಂತಹ ವಿಷಮ ಪರಿಸ್ಥಿತಿಯನ್ನು ನಿವಾರಿಸಲು ಕರ್ನಾಟಕ ಸರ್ಕಾರ ಹಾಕಿಕೊಂಡಿರುವ ಐದು ಅಂಶಗಳ ರಹಸ್ಯ ಕಾರ್ಯಕ್ರಮ.

ಈ ಕಾರ್ಯಕ್ರಮ ಎಷ್ಟು ರಹಸ್ಯದ್ದೆಂದರೆ, ಮುಖ್ಯಮಂತ್ರಿಗಳಾಗಲೀ, ಸಚಿವರಾಗಲೀ ಅಥವಾ ಅಧಿಕಾರಿಗಳಾಗಲೀ ಇಂತಹ ಕಾರ್ಯಕ್ರಮವೊಂದು ಇದೆ ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು ಸಿದ್ಧರಿಲ್ಲ. ವಿನಯಶೀಲರೂ, ನಿಗರ್ವಿಗಳಿಂದಲೇ ತುಂಬಿರುವ ನಮ್ಮ ಸರ್ಕಾರದಲ್ಲಿ ಇಂತಹ ಉತ್ತಮ ಕಾರ್ಯಕ್ರಮ ತಾನೇ ರೂಪಿಸಿದ್ದೆಂದು ಹೇಳಿಕೊಳ್ಳಲು ಒಬ್ಬರಾದರೂ ನಮ್ಮ ವರದಿಗಾರರ ಮುಂದೆ ಹೇಳಿಕೊಳ್ಳಲಿಲ್ಲ; ಬದಲಿಗೆ, ರಾಜ್ಯ ಮತ್ತು ಭಾಷೆಯ ಹಿತ ರಕ್ಷಣೆಯ ಸಲುವಾಗಿ ಈ ವರದಿ ಪ್ರಕಟಿಸಬಾರದೆಂದು ನಮ್ಮ ಪತ್ರಿಕೆಯನ್ನು ಹಲವರು ಒತ್ತಾಯಿಸಿದರು.

ಐದು ಅಂಶಗಳ ಕಾರ್ಯಕ್ರಮದ ವಿವರ:

೧. ಬೆಟರ್ ಬಿಹಾರ್ ಸ್ಕೀಮ್
ಈ ಅಂಶದಡಿ, ಕರ್ನಾಟಕಕ್ಕೆ ಕೇಂದ್ರದಿಂದ ಬರಬೇಕಿರುವ ಹಣವನ್ನು ಪೂರ್ಣವಾಗಿ ಉಪಯೋಗಿಸದೆ, ಆ ಹಣ ಬಿಹಾರಕ್ಕೋ, ತಮಿಳುನಾಡಿಗೋ ಹೋಗುವಂತೆ ಮಾಡುವುದು ಜೊತೆಗೇ ಕರ್ನಾಟಕದಲ್ಲಿ ಜೀವನ ದುಸ್ತರ ಮಾಡುವುದು
ಶಿಕ್ಷಣ, ಆರೋಗ್ಯ, ಉದ್ಯೋಗ ಇತ್ಯಾದಿ ವಿಚಾರಗಳಲ್ಲಿ ಪರಿಸ್ಥಿತಿ ವಿಷಮಿಸುವಂತೆ ಮಾಡಿ, ಕನ್ನಡದ ಜನ ಕರ್ನಾಟಕ ಬಿಟ್ಟು ಬಿಹಾರಕ್ಕೂ ಹೋಗಲು ಸಿದ್ಧರಾಗುವಂತೆ ಮಾಡುವುದು.

೨. ಬಿಟ್ಟರ್ ಬೆಂಗಳೂರು ಸ್ಕೀಮ್
ಕರ್ನಾಟಕದ ಇತರೆ ಊರುಗಳಿಂದ ಬೆಂಗಳೂರಿಗೆ ಜನರು ಬಂದು ನೆಲೆಸದಂತೆ ಮಾಡಲು ಬೆಂಗಳೂರಿನಲ್ಲೆ ಭೂಮಿಯ ಬೆಲೆಯನ್ನು ಆಕಾಶಕ್ಕೆ ಏರಿಸುವ ಯೋಜನೆ. ಜೊತೆಗೆ, ಬೆಂಗಳೂರಿನಲ್ಲಿ ಟ್ರಾಫಿಕ್ ಹೆಚ್ಚಿಸಿ, ರೋಡುಗಳು ಹದಗೆಡುವುವಂತೆ ನೋಡಿಕೊಳ್ಳುವುದು.

೩. ಷಟರ್ ಕನ್ನಡ ಕಂಪೆನೀಸ್ ಸ್ಕೀಮ್
ಕನ್ನಡಿಗರಿಗೆ ಉದ್ಯೋಗ ನೀಡಬಲ್ಲಂತಹ (ಉಳಿದ ಕಂಪೆನಿಗಳಿಗೆ ಹೋಲಿಸಿದರೆ) ಕನ್ನಡಿಗರೇ ಸ್ಥಾಪಿಸಿ, ನಡೆಸುತ್ತಿರುವ ಕಂಪೆನಿಗಳನ್ನು ಕರ್ನಾಟಕದಿಂದ ಹೊರ ಹಾಕುವುದು. ಈ ಅಂಶದ ಸಮರ್ಪಕತೆಯನ್ನು ಪರೀಕ್ಷಿಸಲು, ಇನ್ಫೋಸಿಸ್ ಸಂಸ್ಥೆಯನ್ನು ಗುರುತಿಸಲಾಗಿದೆ.

೪. ನಾಲ್ಕನೆಯ ಅಂಶ ಏನೆಂದು ಮರೆತುಹೋಗಿದೆ.

೫. ವಾಸ್ತವದಲ್ಲಿ, ಸರ್ಕಾರದ ಕಾರ್ಯಕ್ರಮ ನಾಲ್ಕು ಅಂಶಗಳದ್ದೇ ಆಗಿದ್ದರೂ, ಇಂತಹ ಒಂದು ಒಳ್ಳೆಯ ಕಾರ್ಯಕ್ರಮ ರೂಪಿಸಿರುವ ಸರ್ಕಾರವನ್ನು ಪ್ರಶಂಸಿಸಲು, ಇನ್ನೂ ಒಂದು ಅಂಶವನ್ನು ನಮ್ಮ ಪತ್ರಿಕೆ ಸೇರಿಸಿದೆ. ಜೊತೆಗೆ, ಮುಖ್ಯಮಂತ್ರಿಗಳ ಖಾಸಾ ನ್ಯೂಮರಾಲಾಜಿಸ್ಟ್ ಪ್ರಕಾರ, ಐದು ನಾಲ್ಕಕ್ಕಿಂತ ದೊಡ್ಡದು.

Labels: ,

Tuesday, January 17, 2006

ಸಾಹಿತ್ಯರಂಗದಲ್ಲಿ 'ಕೋಲಾ'ಹಲ

"ಮೊದಲ ಹಂತವಾಗಿ ಕೋಕಾಕೋಲ ಕುಡಿಯೋದನ್ನ ಬಿಡೋಣ" - ಯು.ಆರ್.ಎ. ಕರೆ
ಮುಂಬೈ, ಜನವರಿ ೩೧, ೨೦೧೬:ಇಲ್ಲಿಯವರೆಗೆ ದೂರದರ್ಶನದಲ್ಲಿ, ಬಿಲ್‌ಬೋರ್‍ಡ್‍ಗಳ ಮೇಲೆ ಐಷ್ವರ್ಯ ರೈ, ಶಾರೂಖ್ ಖಾನ್, ಸಚಿನ್ ತೆಂಡೂಲ್ಕರ್‌ಗಳ ಮೂಲಕ ನಡೆಯುತ್ತಿದ್ದ ಕೋಕ್-ಪೆಪ್ಸಿಗಳ ನಡುವಿನ ಕೋಲಾ ಕದನ ಈಗ ಕನ್ನಡ ಸಾಹಿತ್ಯರಂಗಕ್ಕೂ ಕಾಲಿಟ್ಟಿರುವುದು ಕೋಲಾಹಲಕಾರಿ ವಿಷಯವಾಗಿದೆ.

ಈ ಸೋಡಾ ಸಮರದಲ್ಲಿ, ಪೆಪ್ಸಿ ಕಂಪೆನಿ ಕನ್ನಡದ ಖ್ಯಾತ ಸಾಹಿತಿ ಯು.ಆರ್.ಅನಂತಮೂರ್ತಿಯವರನ್ನು ಸಹಿ ಮಾಡಿ ತನ್ನ ಪ್ರಥಮ ಅಸ್ತ್ರವನ್ನು ಬಿಟ್ಟಿದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ.

ಈ ಮಾರ್ಕೆಟಿಂಗ್ ಯುದ್ಧದಲ್ಲಿ, "ಮೊದಲ ಹಂತವಾಗಿ ಕೋಕಾಕೋಲ ಕುಡಿಯೋದನ್ನ ಬಿಡೋಣ" ಎಂದು ಅನಂತಮೂರ್ತಿಯವರು ಕರೆಯಿತ್ತಿರುವುದು ಈ ವರದಿಯನ್ನು ಮತ್ತಷ್ಟು ಪುಷ್ಟೀಕರಿಸಿದೆ.

ಇಷ್ಟೆಲ್ಲಾ ಹೈಪ್ ಮಧ್ಯೆ, ಅನಂತಮೂರ್ತಿಯವರ ಮುಂದಿನ ಕೃತಿ `ಪೆಪ್ಸಿ ಪ್ರಾಯೋಜಿತ "ನೊರೆ"' ಜನ ಮನ್ನಣೆಗೆ ಮತ್ತು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗುವುದೋ ಎಂದು ಕಾದು ನೋಡ ಬೇಕಾಗಿದೆ.

ಕನ್ನಡ ಸಾಹಿತ್ಯ ಉಳಿಸುವುದು-ಬೆಳೆಸುವುದು ಹೇಗೆಂದು ಬ್ಲಾಗುಗಳಲ್ಲಿ ವೆಬ್ ಸೈಟುಗಳಲ್ಲಿ ಕಾವೇರಿದ ಚರ್ಚೆ ನಡೆಯುತ್ತಿರುವಂತೆಯೇ, ಈ ಸಾಹಿತ್ಯ-ಸೋಡಾಗಳ ಸಮ್ಮಿಳನವಾಗಿರುವುದು ಸಾಹಿತ್ಯ ವಲಯದಲ್ಲಿ ಮಾತ್ರವಲ್ಲ, ಮಾರ್ಕೆಟಿಂಗ್ ಜಗತ್ತಿನಲ್ಲೂ ಅತೀವ ಚರ್ಚೆಗೆ ಗುರಿಯಾಗಿದೆ.

ಆದರೆ, ಪಾಟಿಯಾಲಾದ ಗ್ಯಾನಿ ಜೈಲ್ ಸಿಂಗ್ ವಿ.ವಿ,ಯ ಮಾರ್ಕೆಟಿಂಗ್ ಪ್ರಾಧ್ಯಾಪಕ ಡಾ.ಭೇಜನ್ ಸಿಂಗ್ ಅಹ್ಲುವಾಲಿಯಾ ಪ್ರಕಾರ ಇದೇನೂ ಅಂತಹ ಆಶ್ಚರ್ಯಕರ ಬೆಳವಣಿಗೆ ಏನೂ ಅಲ್ಲ, ಇಂತಹ ಒಪ್ಪಂದಗಳಿಂದ ಸೋಡಾ ಕಂಪೆನಿ ಮತ್ತು ಸಾಹಿತಿಗಳು ಇಬ್ಬರಿಗೂ ಲಾಭವಾಗುತ್ತದೆ.

ಕೋಕ್ ಪ್ರತ್ಯಸ್ತ್ರ ? ಪೆಪ್ಸಿ ಕಂಪೆನಿಯವರು ಅನಂತ ಮೂರ್ತಿಯವರನ್ನು ಸಹಿ ಮಾಡಿರುವ ಸುದ್ದಿ ಹೊರ ಬರುತ್ತಿರುವಂತೆಯೇ, ಕೋಕಾಕೋಲ ಕಂಪೆನಿ ಜ್ನಾನಪೀಠ ಪ್ರಶಸ್ತಿ ಮತ್ತು ಇತರೆ ಸಾಹಿತ್ಯ ಪ್ರಶಸ್ತಿಗಳನ್ನು ಪ್ರಾಯೋಜಿಸುವ ಸನ್ನಾಹ ನಡೆಸಿರುವ ವಿಚಾರ ಸಹ ಹೊರ ಬಂದಿದೆ. ಈ ಸುದ್ದಿ ನಿಜವೇ ಆದಲ್ಲಿ, ಜ್ನಾನಪೀಠ ಪ್ರಶಸ್ತಿಯನ್ನು "ಕೋಕ್ ಜ್ನಾನಪೀಠ ಪ್ರಶಸ್ತಿ" ಎಂದು ಕರೆಯಲಾಗುವುದು.

ಕೆಲ ಒಳ ವಲಯಗಳ ಪ್ರಕಾರ, ಈ ಹೊಸ ನಾಮಧೇಯವನ್ನು, ಹಿಂದೆ ಪ್ರಶಸ್ತಿ ಪಡೆದವರಿಗೂ ಅನ್ವಯಿಸಲಾಗುವುದು. ಹಾಗೇನಾದರೂ ಆದಲ್ಲಿ, ಕೋಕ್-ಜ್ನಾನಪೀಠ ಪ್ರಶಸ್ತಿ ವಿಜೇತ ಯು.ಆರ್.ಅನಂತಮೂರ್ತಿಯವರ ಪೆಪ್ಸಿ ಪ್ರಾಯೋಜಿತ ನೊರೆ ಕಾದಂಬರಿಯನ್ನು ನಿಮ್ಮ ಹತ್ತಿರದ ಪಿಜ್ಜಾಹಟ್ಟಿನಲ್ಲಿ ಕಾಣುವ ದಿನಗಳು ದೂರವಿಲ್ಲ.

Labels: ,

Monday, January 16, 2006

ಹೆಂಡ.. ಹೆಂಗಸರು.. ಹೈಕೋರ್ಟ್


ದೆಹಲಿ, ಜನವರಿ,೧೩, ೨೦೦೬: ಬಾರುಗಳಲ್ಲಿ, ರೆಸ್ಟೋರೆಂಟುಗಳಲ್ಲಿ, ಹೋಟೆಲುಗಳಲ್ಲಿ ಮಹಿಳೆಯರು ಮದ್ಯ ಸರಬರಾಜು ಮಾಡುವುದಕ್ಕೆ ಇದ್ದ ನಿರ್ಬಂಧವನ್ನು ದೆಹಲಿ ಹೈಕೋರ್‍ಟ್ ರದ್ದು ಮಾಡಿದೆಯೆಂದು ಇತರೆ ಪತ್ರಿಕೆಗಳಲ್ಲಿ ವರದಿಯಾಗಿದೆ. (ನಮ್ಮ ಪತ್ರಿಕೆಯ ತನಿಖಾ ವರದಿಗಾರ ದೇವದಾಸ್, ಈ ವಿಷಯಕ್ಕೆ ಸಂಬಂಧಿಸಿದಂತೆ ಪೂರ್ಣ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅವರ ವರದಿಗಾಗಿ ನಿರೀಕ್ಷಿಸಿ.)

ದೆಹಲಿ ಹೈಕೋರ್ಟ್ ಪ್ರಕಾರ ಈ ನಿರ್ಬಂಧಗಳು, ಪುರಾಣದ ಪ್ರಕಾರ ಮಹಾ ವಿಷ್ಣುವೇ ಮೋಹಿನಿಯ ಅವತಾರದಲ್ಲಿ ಅಸುರರಿಗೆ ಸುರಾಪಾನ ಮಾಡಿಸಿರುವ ಪ್ರಸಂಗಕ್ಕೆ ವ್ಯತಿರಿಕ್ತವಾಗಿದೆ ಹಾಗೂ ಭಾರತೀಯ ಸಂವಿಧಾನದ ಆರ್ಟಿಕಲ್ ೧೯ (೧),(ಎಫ್), ೧೪ ಮತ್ತು ೧೫ ಗಳಿಗೆ ವಿರುದ್ಧವಾಗಿದೆ.

ನಮ್ಮ ಪತ್ರಿಕೆಯ ನ್ಯಾಯಾಂಗ ವಿಶ್ಲೇಷಕರ ಪ್ರಕಾರ ಈ ತೀರ್ಪು ಎಂದೋ ಬರಬೇಕಿತ್ತು. ಕೋರ್ಟ್‍ಗಳಲ್ಲಿ ವಾದಿಸುವ ವಕೀಲರೆಲ್ಲರೂ ಬಾರ್ ಕೌನ್ಸಿಲ್ ಸದಸ್ಯರೇ ಆಗಿರುವಾಗ, ನ್ಯಾಯಾಲಯ ಬಾರುಗಳ ಮಾಲೀಕರ ಪರ ತೀರ್ಪು ಇತ್ತಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ.

ಅಶೋಕ್ ಸಿಂಘಲ್ ಸ್ವಾಗತ: ದೆಹಲಿ ಹೈಕೋರ್ಟ್ ತೀರ್ಪಿನ ಬಗೆಗೆ ವರದಿಗಾರರೊಂದಿಗೆ ಮಾತನಾಡುತ್ತಿದ್ದ ವಿಶ್ವ ಹಿಂದು ಪರಿಷದ್ ನಾಯಕ ಶ್ರೀ ಅಶೋಕ್ ಸಿಂಘಾಲ್, ಹೈಕೋರ್ಟಿನ ಈ ತೀರ್ಪನ್ನು "ಭಾರತೀಯ ಸಂಸ್ಕೃತಿಯ ಗೆಲುವು" ಎಂದು ಶ್ಲಾಘಿಸಿದರು. "ಪರಮಾತ್ಮ ಒಳಗೆ ಇಳಿಯುವ ಮುನ್ನ ಮಹಿಳೆಯರ ಕೈ ತಾಕಿದರೆ ತೀರ್ಥದ ಪಾವಿತ್ರ್ಯತೆ ಕಡಿಮೆಯೇನೂ ಆಗುವುದಿಲ್ಲ" ಎಂದು ಸುದ್ದಿಗಾರರಿಗೆ ಅವರು ತಿಳಿಸಿದರು.

ಗೌರಿ ಲಂಕೇಶ್ ಖಂಡನೆ: ಹಿಂದುತ್ವ ವಾದಿಗಳು ದೆಹಲಿ ಹೈಕೋರ್ಟ್ ತೀರ್ಪನ್ನು ಶ್ಲಾಘಿಸುತ್ತಿದ್ದಂತೆಯೇ, ಎಡ ಪಂಥೀಯ ಬುದ್ಧಿ ಜೀವಿಗಳು ಈ ತೀರ್ಪಿನ ವಿರುದ್ದ ಕಿಡಿಕಾರಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಗೌರಿ ಲಂಕೇಶ್‌ರವರು, "ದೆಹಲಿ ಹೈಕೋರ್ಟ್ ತೀರ್ಥ, ಪರಮಾತ್ಮ ಇತ್ಯಾದಿ ಧಾರ್ಮಿಕ ವಿಚಾರಗಳಲ್ಲಿ ತಲೆ ಹಾಕಿರುವುದು ಸಂವಿಧಾನದ ಜಾತ್ಯಾತೀತಯೆಯ ಅಡಿಪಾಯಕ್ಕೆ ಅಪಾಯ" ಎಂದು ಖಂಡಿಸಿದ್ದಾರೆ.

ಅಮೆರಿಕಂದಮ್ಮಗಳ ಆಕ್ರಂದನ - ಕಿವಿಗೊಡದ ಸರ್ಕಾರ


ಮಜಾವಾಣಿ ವಿಶೇಷ ವರದಿ
ಬೆಂಗಳೂರು, ಜೂನ್ ೩೧, ೨೦೦೫
ನ್ಯೂಜರ್ಸಿಯ ಏರ್‌ಕಂಡೀಷನ್ ಅಪಾರ್ಟ್‍ಮೆಂಟುಗಳಿಂದ ಹಿಡಿದು, ಕ್ಯಾಲಿಫೋರ್ನಿಯಾದ ಮಿಲಿಯನ್ ಡಾಲರ್ ಬಂಗಲೆಗಳಲ್ಲಿ ಕೇಳಿ ಬರುವುದು ಒಂದೇ ಹೃದಯವಿದ್ರಾವಕ ಆಕ್ರಂದನ. ಕೇಳುಗರ ಕಂಗಳಲ್ಲಿ ಕಂಬನಿಯ ಕಟ್ಟೆಯೊಡೆಸುವ ಈ ಹತಭಾಗ್ಯರ ಕರುಣಾಜನಕ ಕೂಗೂ ಒಂದೇ: "ಬೆಂಗಳೂರಿನಲ್ಲಿ ಭೂಮಿಯ ಬೆಲೆ ಆಕಾಶ ಮುಟ್ಟಿದೆ"

ಉದಾಹರ್‍ಅಣೆಗೆ, ನ್ಯೂಜರ್ಸಿಯಲ್ಲಿ, ಮುಂದೆ ಯಾರಿಗೂ ಬೇಡದ ಹೂ ಗಿಡಗಳ ತೋಟ, ಮನೆಯ ಹಿಂದೆ ಹಲವು ಮಂದಿ ಈಜಾಡುವಷ್ಟು ನಿಂತಿರುವ ನೀರು, ಇಂತಹ ದುರ್ಗತಿಯ ನಡುವೆ ಇಟ್ಟಿಗೆ-ಸಿಮೆಂಟಿಗೂ ದುಡ್ಡಿಲ್ಲದೆ ಮರದಲ್ಲಿ ಕಟ್ಟಿದ ಕೇವಲ ಆರು ಬೆಡ್ ರೂಮುಗಳಿರುವ ಪುಟ್ಟ ಮನೆ. ಸಿನೆಮಾ ಹಾಲಿನಲ್ಲಿ ಪಿಕ್ಚರ್ ನೋಡಲು ಗಾಂಧಿ-ಕ್ಲಾಸ್ ಸೀಟಿಗೂ ಗತಿ ಇಲ್ಲದೆ, ಮನೆಯ ಅಡಿಪಾಯದ ಬದಲು ಮನರಂಜನಾ ಕೊಠಡಿ ಮಾಡಿಕೊಂಡಿರುವಂತಹ ನತದೃಷ್ಟರು ಈ ಮನೆಯ ಮಂದಿ. (ಮನೆಮಂದಿಯ ಆರೋಗ್ಯ ಸಹ ಅಷ್ಟಕ್ಕಷ್ಟೆ. ಬಹುಶಃ ಆಮಶಂಕೆ ಇರಬೇಕು; ಪ್ರತಿ ಕೋಣೆಗೂ ಹೊಂದಿ ಕೊಂಡಂತೆ ಬಚ್ಚಲು ಮನೆಗಳಿವೆ. ಎಂತಹ ಕಟುಕರಿಗೂ ಕರುಳು ಚುರ್ರೆನ್ನುವ ದೃಶ್ಯ.) ಇಂತಹ ದೌರ್ಭಾಗ್ಯರು ಜೀವಿಸುವ ಮನೆಯ ಒಡೆಯ ಅಕ್ಕಿನೇನಿ ಚಿರಂಜೀವಿ ರಾವು ಮೂಲತಃ ಕನ್ನಡಿಗನಲ್ಲ. ಬೆಂಗಳೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ನಾಲ್ಕು ವರ್ಷಗಳ ಎಂಜಿನಿಯರಿಂಗ್ ಕೋರ್ಸನ್ನು ಮತ್ತಷ್ಟು ಚೆನ್ನಾಗಿ ಕಲಿಯಲು, ಇನ್ನೆರ್‍ಅಡು ವರ್ಷ ಹೆಚ್ಚಿಗೆ ಓದಿದ್ದರೂ ಕನ್ನಡದ ಒಂದು ಪದವನ್ನೂ ಕಲಿತರವಲ್ಲ. ಆದರೂ ಕನ್ನಡದ ನೆಲದ ಮೇಲಿನ ಅವರ ಪ್ರೇಮ ಮಾತ್ರ ಎಂತಹ ಕನ್ನಡಿಗನ ಹೃದಯವನ್ನೂ ತಟ್ಟುವಂತಹುದು.

ಇಂತಹ ಕಿತ್ತು ತಿನ್ನುವ ಬಡತನದ ನಡುವೆಯೂ ಕನ್ನಡದ ನೆಲದ ಮೇಲಿನ ಅಭಿಮಾನವನ್ನು ಬಿಟ್ಟಿರದ ಚಿರಂಜೀವಿ ರಾವುರವರನ್ನು ನಮ್ಮ ವರದಿಗಾರರು ಸಂದರ್ಶಿಸಿದಾಗ ಅವರೆಂದ ಮಾತುಗಳು ನಮ್ಮ ಹೃದಯವನ್ನು ಮುಟ್ಟದೇ ಇರಲಿಲ್ಲ. ಅವರ ನೆಂಟರಿಷ್ಟರು ಬೆಂಗಳೂರಿನಲ್ಲಿ ಹತ್ತು ಹಲವು ಸೈಟು ಕೊಂಡಿದ್ದರೂ, ರಾವು ಕೊಂಡಿರುವುದು ಕೇವಲ ಎರಡು ಮನೆ ಮತ್ತು ಒಂದು ಸೈಟು ಮಾತ್ರ. ಅದೂ, ಇಡೀ ಸಮಾಜವೇ ತಿರಸ್ಕಾರದಿಂದ ನೋಡುವ ರಾಜಕಾರಣಿಗಳು ನೆಲೆಸಿರುವ ಸದಾಶಿವ ನಗರದಲ್ಲಿ. "ಇನ್ನೊಂದು ಸೈಟು ಖರೀದಿ ಮಾಡುವ ಯೋಚನೆ ಇದೆ, ಆದರೆ, unaffordable!" ಎಂದು ಗೋಳಿಟ್ಟರು.

"Unaffordable!", ಕ್ಯಾಲಿಫೋರ್ನಿಯಾದ ಹ್ಯಾರಿ ಭಟ್ ಅವರದೂ ಅದೇ ಆಕ್ರಂದನ. ಬೆಂಗಳೂರಿನಲ್ಲಿಯೇ ಹುಟ್ಟಿ- ಬೆಳೆದರೂ ಕನ್ನಡ ಮಾತನಾಡದ ಈ ಹುಟ್ಟು ಕನ್ನಡಿಗನ ನೋವೂ ಸಹ ಚಿರಂಜೀವಿ ರಾವುರವರ ಗೋಳಿನಂತೆಯೇ ಕರುಳು ಹಿಂಡುವಂತಹುದು. ಬಿ.ಡಿ.ಎ.ಯಿಂದ ತನ್ನ ತಂದೆ ಮತ್ತು ತಾಯಿಯ ಹೆಸರಲ್ಲಿ ಕೇವಲ ತಲಾ ಒಂದು ಮಾತ್ರ ಸೈಟು ಪಡೆದಿರುವ ಭಟ್ಟರಿಗೆ, ಮತ್ತೆರಡು ಸೈಟುಗಳನ್ನು ಖರೀದಿಸಿ ಕನ್ನಡದ ನೆಲದ ಮೇಲಿನ ಅಭಿಮಾನವನ್ನು ತೋರುವ ತವಕ. "ನನಗೆ ಈಗಾಗಲೇ ಮೂವತ್ತೆರ್‍ಅಡು ವರ್ಷ. ಮೂವತ್ತೈದಕ್ಕಿಂತ ಮುಂಚೆ ಬೆಂಗಳೂರಿನಲ್ಲಿ ಐದು ಸೈಟು ಹೊಂದುವ ಆಸೆಯಿದೆ. ನನ್ನ ಆಸೆ ಈಡೇರುವುದೋ ಇಲ್ಲವೋ..." ಎಂದು ನೋವಿನಿಂದ ನುಡಿದರು.

ಅಮೆರಿಕಂದಮ್ಮಗಳ ಇಷ್ಟೆಲ್ಲಾ ನೋವಿಗೆ ಕಾರಣವಾಗಿರುವುದು ಮುಗಿಲು ಮುಟ್ಟಿರುವ ನೆಲದ ಬೆಲೆಯಲ್ಲ; "ಡಿಮ್ಯಾಂಡ್ ಮತ್ತು ಸಪ್ಲೈ" ಎಂಬ ಆರ್ಥಿಕ ತತ್ವ. ಈ ವಿಷಯವನ್ನು ಬಿಡಿಸಿ ಹೇಳಿದ ಪಾಟಿಯಾಲಾದ ಗ್ಯಾನಿ ಜೈಲ್ ಸಿಂಗ್ ವಿ.ವಿ.ಯ ಭೂಗರ್ಭವತಿ ಡಾ.ಇಳಾ ದೇವಿಯವರು, ಮುಗಿಲು ತುಂಬಾ ಎತ್ತರದಲ್ಲಿದ್ದು, ಯಾವುದೇ ಬೆಲೆ ಅದನ್ನು ಮುಟ್ಟುವ ಸಾಧ್ಯತೆಯನ್ನು ತಳ್ಳಿ ಹಾಕಿದರು. "ಇತ್ತೀಚೆಗೆ ಕಟ್ಟಡಗಳ ಸಂಖ್ಯೆ ಜಾಸ್ತಿಯಾಗುತ್ತಿರುವುದರಿಂದ, ಖಾಲಿ ನೆಲದ ಕೊರತೆ ಉಂಟಾಗಿದೆ, ಅಷ್ಟೆ" ಎಂದರು. ಬಹಳ ಖಾಲಿ ಪ್ರದೇಶಗಳಿರುವ ರಾಜಸ್ತಾನದಿಂದ ಖಾಲಿ ನೆಲವನ್ನು ಆಮದು ಮಾಡಿಕೊಳ್ಳುವಂತೆ ತಾವು ನೀಡಿದ ಸಲಹೆಗೆ ಕರ್ನಾಟಕ ಸರ್ಕಾರ ಕಿವಿಗೊಟ್ಟಿಲ್ಲ ಎಂದೂ ತಿಳಿಸಿದರು.

Sunday, January 15, 2006

ಮಜಾವಾಣಿ ಸಂಪಾದಕೀಯ
ವೆಲ್‍ಡನ್ ಧರ್ಮಸಿಂಗ್!

"ÈæÅésÚ«é ¨ÚÈÚß%ÒMVé @M¥ÚÃ, ¬ÈÚáé VÚMmé H«é ÔæàÞVæë~. «ÛÅéQ ^ÚÅæàÞ ÈÚáÛ}Úß …ÂÞÁÚÅÛÇ...' ಎಂದು ಮುಖ್ಯಮಂತ್ರಿ ಧರ್ಮಸಿಂಗ್‍ರವರು ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದರೆಂದು ನಮ್ಮ ಪ್ರತಿಸ್ಪರ್ಧಿ ಪತ್ರಿಕೆಯಾದ ಕನ್ನಡ ಪ್ರಭ ದಿನಪತ್ರಿಕೆಯ ಜನವರಿ ೧೬, ೨೦೦೬ ಭಾನುವಾರದ ಸಂಚಿಕೆಯಲ್ಲಿ ವರದಿಯಾಗಿದೆ.

ಕರ್ನಾಟಕದ ಸುದ್ದಿ ಮಾಧ್ಯಮಗಳಿಗೆ ಮುಖ್ಯಮಂತ್ರಿ ಧರ್ಮಸಿಂಗ್‍ರವರು ಮಾಡಿರುವ ಮನವಿ ಅತ್ಯಂತ ಸೂಕ್ತವೂ, ವೈಜ್ನಾನಿಕವೂ ಆಗಿದೆ.

ನಮ್ಮ ಪತ್ರಿಕೆ ಉಳಿದ ಪತ್ರಿಕೆಗಳಂತಲ್ಲ. ಪ್ರಜೆಗಳು, ಓದುಗರು, ವಸ್ತುನಿಷ್ಠತೆ ಇತ್ಯಾದಿ ಪಟ್ಟಭದ್ರ ಹಿತಾಸಕ್ತಿಗಳ ಶಿಫ಼ಾರಸು, ಆಮಿಶ, ಬೆದರಿಕೆಗಳಿಗೆ ತಲೆಬಾಗುವಂತಹ ಪತ್ರಿಕೆಯಂತೂ ನಮ್ಮದಲ್ಲವೇ ಅಲ್ಲ. ಪ್ರತ್ಯಕ್ಷ ಕಂಡಿದ್ದನ್ನೂ ಪ್ರಮಾಣಿಸಿ ನೋಡುವ ಪರಿಪಾಠ ಬೆಳೆಸಿಕೊಂಡಂತಹವರು ನಾವು. ಧರ್ಮಸಿಂಗ್ ಹೇಳಿಕೆಯ ಹಿಂದಿನ ಸತ್ಯಾಸತ್ಯತೆಯನ್ನು ವೈಜ್ನಾನಿಕವಾಗಿ ಪರಿಶೀಲಿಸಿ ಅಂತಿಮ ನಿರ್ಧಾರಕ್ಕೆ ಬಂದಹಂತಹ ಏಕೈಕ ಪತ್ರಿಕೆಯೆಂದರೆ ಮಜಾವಾಣಿ!

"ವೆಲ್‍ಡನ್ ಧರ್ಮಸಿಂಗ್" ವಾಕ್ಯವನ್ನು ಬರೆಯುವ ಮುನ್ನ ಒಂದು ಗಂಟನ್ನು ಮೇಜಿನ ಮೇಲೆ ಇಟ್ಟು, ಅನಂತರ ಆ ವಾಕ್ಯವನ್ನು ಬರೆದೆವು. ಮುಖ್ಯಮಂತ್ರಿಯವರು ಹೇಳಿದಂತೆ, ಗಂಟು ಏನೂ ಹೋಗಲಿಲ್ಲ. ಆಶ್ಚರ್ಯವೆಂಬಂತೆ, ಆ ಗಂಟಿನಲ್ಲಿದ್ದ ಹಳೆಯ ವಸ್ತ್ರಗಳೂ ಅಲ್ಲಿಯೇ ಇದ್ದವು. ಇಂತಹ ಅಪ್ಪಟ ಸತ್ಯವನ್ನು ಹೊರತಂದಂತಹ ಧರಂಸಿಂಗ್ ಬಗ್ಗೆ ಕನ್ನಡದ ಉಳಿದ ಪತ್ರಿಕೆಗಳು ನಾಲ್ಕಾರು ಒಳ್ಳೆಯ ಮಾತನ್ನು ಬರೆಯಲು ಹಿಂಜರಿಯುತ್ತಿರುವುದು ಖಂಡನೀಯ. ಈ ಪತ್ರಿಕೆಗಳ ಇಂತಹ ಮನೋಭಾವನೆಗೆ ಮುಖ್ಯ ಕಾರಣವೆಂದರೆ "ವಸ್ತು ನಿಷ್ಠ ವರದಿ" ಎಂಬ ಅಸಹ್ಯ ತಾತ್ವಿಕ ಕನ್ನಡಕ. ನಮ್ಮ ವೈಜ್ನಾನಿಕ ಪ್ರಯೋಗದ ನಂತರವಾದರೂ, ಈ ಪತ್ರಿಕೆಗಳು, ಪ್ರತಿ ವಿಷಯವನ್ನೂ "ವಸ್ತುನಿಷ್ಠತೆಯ" ದೃಷ್ಟಿಯಿಂದ ನೋಡುವ ದುರಭ್ಯಾಸವನ್ನು ಬಿಟ್ಟಾರೆಂಬ ಆಶಯ ನಮ್ಮದು.

ನಾವು ಈ ಸಂಪಾದಕೀಯ ಬರೆಯುವ ಪ್ರಯತ್ನದಲ್ಲಿದ್ದಾಗ, ನಮ್ಮನ್ನೂ ತಪ್ಪು ದಾರಿಗೆ ಎಳೆಯುವ ಹಲವು ಪ್ರಯತ್ನಗಳು ನಡೆದವು. ಉದಾಹರಣೆಗೆ, ಧರಂಸಿಂಗರ "ಚಲೋ ಮಾತು" ಪದಗಳನ್ನು ತಿರುಚಿ, ಹಾಗೆಂದರೆ, "ಮುಖ್ಯಮಂತ್ರಿಗಳು ಹೊರ ಹೋಗುವ ವಿಚಾರ" ಎಂದು ಹಲವು ಕಾರ್ಯನಿರತ ಪತ್ರಿಕಾಕರ್ತರು ನಮ್ಮನ್ನು ನಂಬಿಸಿದರು. ಆದರೆ, ಹಲವು ಗಂಟೆಗಳ ಅಧ್ಯಯನದ ನಂತರ "ಚಲೋ" ಎಂದರೆ "ಒಳ್ಳೆಯ" ಎಂಬ ಅರ್ಥ ನಮ್ಮ ಗಮನಕ್ಕೆ ಬಂತು.

ಮುಖ್ಯಮಂತ್ರಿಗಳು ತಮ್ಮ ಮನವಿಯಲ್ಲಿ "ಯೋಜನಾ ಗಾತ್ರ ಹೆಚ್ಚಿರುವುದು ಸರ್ಕಾರದ ಸಾಧನೆ" ಎಂದಿದ್ದಾರೆ. ನಿಗರ್ವಿಗಳೂ, ವಿನಯವಂತರೂ ಆದ ಅವರು ತಮ್ಮ ವೈಯುಕ್ತಿಕ ಸಾಧನೆಯ ಕುರಿತು ಬೇಕೆಂದೇ ಏನನ್ನೂ ಹೇಳಿಲ್ಲ. ಯೋಜನೆಯ ಗಾತ್ರದ ಹೆಚ್ಚಿಗೆ ಸರ್ಕಾರದ ಸಾಧನೆಯೇ ಕಾರಣವಾದರೆ, ಮುಖ್ಯಮಂತ್ರಿಗಳ ಗಾತ್ರ ಹೆಚ್ಚಿರುವುದಕ್ಕೆ, ಧರ್ಮಸಿಂಗರ ವೈಯುಕ್ತಿಕ ಸಾಧನೆಯೇ ಕಾರಣ. ವೆಲ್‍ಡನ್ ಧರ್ಮಸಿಂಗ್!

"ಎಡಚರಿಗೆ ಜ್ನಾನಪೀಠ ದೊರೆಯಲಿ" - ವಿಷ್ಣುವರ್ಧನ್


ಕನ್ನಡದ ಲೇಖಕಿಯರಿಗೆ "ಜ್ನಾನಪೀಠ ದೂರಪೀಠವಾಗಿದೆ" ಎಂದು ಖ್ಯಾತ ತಾರೆ ಬಿ.ಸರೋಜದೇವಿಯವರು ನೊಂದು ನುಡಿದಿರುವ ಹಿನ್ನೆಲೆಯಲ್ಲೇ, ಕನ್ನಡದ ಖ್ಯಾತ ನಟ ಸಾಹಸ ಸಿಂಹ ವಿಷ್ಣುವರ್ಧನ್‍ರವರು ಎಡಗೈಯಲ್ಲಿ ಬರೆಯುವ ಸಾಹಿತಿಗಳಿಗೆ ಜ್ನಾನಪೀಠ ಪ್ರಶಸ್ತಿ ದೊರೆಯುವುದಿರುವುದಕ್ಕೆ ತಮ್ಮ ಖೇದವನ್ನು ವ್ಯಕ್ತಪಡಿಸಿದ್ದಾರೆ.

"ಈ ಬಲಗೈ ಪ್ರಧಾನ ಸಮಾಜದಲ್ಲಿ ಎಡಗೈ ಲೇಖಕರು ನಿರ್ಲಕ್ಷ್ಯಕ್ಕೆ ಎಡೆಯಾಗಿದ್ದಾರೆಂಬುದಕ್ಕೆ -- ಅಲ್ಲ ಬಲಿಯಾಗಿದ್ದಾರೆಂಬುದಕ್ಕೆ -- ಕನ್ನಡದ ಯಾವುದೇ ಎಡಗೈ ಲೇಖಕನಿಗೆ ಜ್ನಾನಪೀಠ ಪ್ರಶಸ್ತಿ ಲಭಿಸದಿರುವುದು ಜೀವಂತ ಉದಾಹರಣೆ" ಎಂದು ವಿಷ್ಣುವರ್ಧನ್ ಪತ್ರಕರ್ತರಿಗೆ ತಿಳಿಸಿದರು.

"ಇನ್ನು ಮುಂದಾದರೂ ಉತ್ತಮ ಲೇಖಕರ ಪಟ್ಟಿ ಮಾಡುವಾಗ ಎಡಗೈ ಲೇಖಕರನ್ನು ಗುರುತಿಸುವ ಕಾರ್ಯ ನಡೆಯಲಿ" ಎಂದು ಆಶಿಸಿದರು.

Labels: ,

"ತಿಪ್ಪಾರಳ್ಳಿ ನಾಡಗೀತೆಯಾಗಲಿ"-ದೇವೇಗೌಡ


ಮಜಾವಾಣಿ ವಾರ್ತೆ, ತಿಪ್ಪಾರಳ್ಳಿ ನವೆಂಬರ್, ೧೯, ೨೦೦೫

ತಿಪ್ಪಾರಳ್ಳಿ: ಇತ್ತೀಚೆಗಿನ ನಾಡಗೀತೆ ವಿವಾದ ತಿಳಿಯಾಗುತ್ತಿರುವಂತೆಯೇ, ಮಾಜಿ ಪ್ರಧಾನಿ ದೇವೇಗೌಡರು ನಾಡಗೀತೆಯ ಜೇನು ಗೂಡಿಗೆ ಕೈ ಹಾಕಿದ್ದಾರೆ. ಉತ್ತರ ಕೆನಡಾದ ಅಧ್ಯಕ್ಷ ಸ್ಥಾನಕ್ಕೆ ತಿಪ್ಪಾರಳ್ಳಿಯಲ್ಲಿ ನಡೆಯುತ್ತಿರುವ ಉಪಚುನಾವಣೆ ಪ್ರಚಾರಕ್ಕಾಗಿ ಆಗಮಿಸಿದ್ದ ಅವರು, ಕೈಲಾಸಂ ವಿರಚಿತ "ತಿಪ್ಪಾರಳ್ಳಿ ಬಲ್ದೂರ" ನಾಡಗೀತೆಯಾಗಲು ಎಲ್ಲಾ ಅರ್ಹತೆ ಪಡೆದಿದೆಯೆಂದರು.

ಉ.ಕೆನಡಾದ ಅಧ್ಯಕ್ಷ ಸ್ಥಾನಕ್ಕೆ ತಿಪ್ಪಾರಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿರುವ ಜೆ.ಡಿ.(ಯು) ಅಭ್ಯರ್ಥಿ ಬೋರೇಗೌಡರ ಪರವಾಗಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, "ಕುವೆಂಪು" ಮತ್ತು "ಕೈಲಾಸಂ" ನಡುವೆ ಹೆಚ್ಚಿನ ಅಕ್ಷರಗಳ ಅಂತರ ಇಲ್ಲವೆಂದು ಒತ್ತಿ ಹೇಳಿದರು.

ನಂತರ ವರದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು "ತಿಪ್ಪಾರಳ್ಳಿ" ಗೀತೆಯಲ್ಲಿ ನೈತಿಕ ಮೌಲ್ಯಗಳು, ಕನ್ನಡ ಸಂಸ್ಕೃತಿ, ಪ್ರಕೃತಿ ಪ್ರೇಮದ ಜೊತೆಗೇ ಸಾಮಾಜಿಕ ಕಾಳಜಿಯಿದೆ ಎಂದರು. ಪೌಡರ್-ಗಿವ್ಡರ್ ಹಚ್ಚಿ ಕಣ್ಣು ಮಿಟುಕಿಸಿದ ಮಹಿಳೆಯಕಡೆಗೆ ಕಣ್ಣೆತ್ತಿ ನೋಡದ ಬೋರೇಗೌಡರ ವರ್ತನೆ ಎಲ್ಲರಿಗೂ ಆದರ್ಶವಾಗಬೇಕು ಎಂದರು. ಈ ಗೀತೆಯಲ್ಲಿ ನಮ್ಮ ಸಂಸ್ಕೃತಿಯ ಪ್ರತೀಕವಾದ ದಸರಾ ಹಬ್ಬ, ಕನ್ನಡಿಗರ ಪ್ರಕೃತಿ ಪ್ರೇಮಕ್ಕೆ ಸಾಕ್ಷಿಯಾಗಿರುವ ಲಾಲ್ ಬಾಗ್ ಪ್ರಸ್ತಾಪವಾಗುವುದನ್ನು ವರದಿಗಾರರ ಗಮನಕ್ಕೆ ತಂದರು.

ನಾರಾಯಣ ಮೂರ್ತಿ ರಾಜಿನಾಮೆ

ಮಜಾವಾಣಿ ವಾರ್ತೆ ಬೆಂಗಳೂರು ನವೆಂಬರ್ ೨೦, ೨೦೦೫
ದೇವೇಗೌಡರು "ತಿಪ್ಪಾರಳ್ಳಿ" ನಾಡಗೀತೆಯಾಗಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲೇ, ಇನ್ಫ಼ೋಸಿಸ್ ಸಂಸ್ಥೆಯ ಅಧ್ಯಕ್ಷ ಬೆಂಗಳೂರು ಜಟಕಾಸ್ಟಾಂಡ್ ನಿರ್ಮಾಣ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆಯಿತ್ತಿದ್ದಾರೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬೆಂಗಳೂರು ಅಂತರರಾಷ್ಟ್ರೀಯ ಜಟಕಾಸ್ಟಾಂಡ್ ನಿರ್ಮಾಣ, ಬೆಂಗಳೂರು-ಹೈದರಾಬಾದ್ ರಸ್ತೆಯಲ್ಲಿರುವ ಹೈದರಾಬಾದ್‌‍ನಲ್ಲಿ ೧೧೦ ಎಕರೆ ಜಮೀನು ಭೂಸ್ವಾಧೀನದ ನಂತರ ಕಾರ್ಯಾರಂಭವಾಗಿರುವುದನ್ನು ಇಲ್ಲಿ ನೆನೆಪಿಸಕೊಳ್ಳಬಹುದು.

ಅವರು ರಾಷ್ಟ್ರಪತಿ ಕಲಂರವರ ಕೈಗಿತ್ತ ರಾಜೀನಾಮೆ ಪತ್ರದಲ್ಲಿ, "ತಿಪ್ಪಾರಳ್ಳಿ" ನಾಡಗೀತೆಯಾಗಬೇಕೆಂಬ ದೇವೇಗೌಡರ ಒತ್ತಾಯದ ಹಿಂದೆ, ತಮ್ಮ ತೇಜೋವಧೆ ಮಾಡುವ ಸಂಚು ಇದೆ ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ. ತಾವು ಬೆಂಗಳೂರಿನಲ್ಲಿ ಇದ್ದ ಮಾತ್ರಕ್ಕೆ, ಯಾವುದೇ ಹಳ್ಳಿ ದೂರ ಎಂಬ ಭಾವನೆ ಹೊಂದಿಲ್ಲ, ಇನ್ಫ಼ೋಸಿಸ್ ಸಂಸ್ಥೆ ಕೇವಲ ಶೇಷಾದ್ರಿಪುರ, ಜೆ.ಪಿ.ನಗರದಂತಹ ಪುರ-ನಗರಗಳಲ್ಲಿ ಮಾತ್ರವಲ್ಲ, ವಿಮಾನ ನಿಲ್ದಾಣದ ಬಳಿ ಇರುವ ಮಾರತ್‍ಹಳ್ಳಿಯಲ್ಲೂ ಭೂ-ಸ್ವಾಧೀನ ಮಾಡಿಕೊಂಡಿರುವುದನ್ನು ಅಂಕಿ-ಅಂಶಗಳ ಸಹಿತ ಒತ್ತಿ ಬರೆದಿದ್ದಾರೆ.


"ತಿಪ್ಪಾರಳ್ಳಿ ಬೇಡ": ಭಾರಿ ಪ್ರತಿಭಟನೆ

ಬೆಂಗಳೂರು (ಪಿ.ಟಿ.ಹೈ.): ತಿಪ್ಪಾರಳ್ಳಿ ನಾಡಗೀತೆಯಾಗಬೇಕೆಂಬ ಒತ್ತಾಯದ ಹಿನ್ನೆಲೆಯಲ್ಲೇ, ಅದನ್ನು ವಿರೋಧಿಸಿ ಆಂದೋಲನ ಆರಂಭವಾಗಿದೆ. ಇಂದು ಬೆಂಗಳೂರಿನಲ್ಲಿ ನಡೆದ ಭಾರಿ ಪ್ರತಿಭಟನೆಯಲ್ಲಿ ಸಹಸ್ರಾರು ಮಂದಿ ಭಾಗವಹಿಸಿದ್ದರು.

ತಮ್ಮ ಪಂಗಡವನ್ನು ಅವಹೇಳನ ಮಾಡುವ ಈ ಗೀತೆಯನ್ನು ನಾಡಗೀತೆಯಾಗಿ ಮಾಡಿದರೆ, ಬಳೇಪೇಟೆಯಲ್ಲಿ ರಾಜ್ಯಾದ್ಯಂತ ಆಂದೋಲನ ಮಾಡುವುದಾಗಿ ಅಖಿಲ ಕಣ್ಣಾಟಕ ಕಣ್ಣು ಮಿಟುಕಿಸುವವರ ಸಂಘದ ಅಧ್ಯಕ್ಷ ಹಿರೇಮಗಳೂರು ಕಣ್ಣನ್ ಮತ್ತು ಕಾರ್ಯದರ್ಶಿ ಮಲಿನಾಕ್ಷಿ ಎಚ್ಚರಿಕೆ ನೀಡಿದ್ದಾರೆ. "ಕಣ್ಣು ಮಿಟುಕಿಸುವುದು ಒಂದು ಸಹಜ ಪ್ರಕ್ರಿಯೆ, ಅದನ್ನು ಗೇಲಿ ಮಾಡುವ ಈ ಪದ್ಯ ಇಡೀ ಮಾನವ ಜನಾಂಗವನ್ನೇ ಅಪಹಾಸ್ಯಕ್ಕೆ ಗುರಿಮಾಡುತ್ತದೆ" ಎಂದು ತಮ್ಮ ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

Labels:

"ನನ್ನ ತಪ್ಪು ಏನೂ ಇಲ್ಲ" - ಸಿದ್ದರಾಮಯ್ಯ
ಸಿ.ಎಂ.ಇಬ್ರಾಹಿಂ, ಮಜಾವಾಣಿ ಮುಖ್ಯ ರಾಜಕೀಯ ವರದಿಗಾರ

ಮೈಸೂರು:ಬ್ರಿಟಿಶ್ ಏರ್‌‍ವೇಸ್ ವಿಮಾನ ಕನ್ನಂಬಾಡಿ ಕಟ್ಟೆಯ ಮೇಲೆ ಇಳಿದಿದ್ದರಲ್ಲಿ ತಮ್ಮ ತಪ್ಪೇನೂ ಇಲ್ಲವೆಂದು ಮಾಜಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪಷ್ಟಪಡಿಸಿದ್ದಾರೆ.

ಬ್ರಿಟಿಷ್ ಏರ್‌ವೇಸ್ ವಿಮಾನದ ಬೆಂಗಳೂರು-ಲಂಡನ್ ಯಾನದ ಉದ್ಘಾಟನೆಯ ಸಂದರ್ಭದಲ್ಲಿ, ಬೆಂಗಳೂರಿನಿಂದ ಇದ್ದಕ್ಕಿದ್ದಂತೆ ಹೊರಟ ವಿಮಾನ ಕನ್ನಂಬಾಡಿ ಕಟ್ಟೆಯ ಮೇಲೆ ಇಳಿದಿದ್ದುದು ನೆನಪಿರಬಹುದು. ಈ ಪ್ರಸಂಗದಲ್ಲಿ ವಿಮಾನದ ಚಕ್ರಗಳ ಗಾಳಿ ಹೋಯಿತಾದರೂ, ಹೆಚ್ಚಿನ ಹಾನಿಯೇನಾಗಲಿಲ್ಲ.

ಈ ಘಟನೆಯ ಕುರಿತು ವರದಿಗಾರರೊಂದಿಗೆ ಮಾತನಾಡುತ್ತಿದ್ದ ಸಿದ್ದರಾಮಯ್ಯ, "ಪೈಲಟ್ಟು, ಆ ಬಟನ್ ಪ್ರೆಸ್ ಮಾಡಿ ಅಂದ. ಪ್ರೆಸ್ ಮಾಡ್ದೆ. ಆಮೇಲೆ ಆ ಹ್ಯಾಂಡಲ್ ಎಳೀ ಅಂತಂದ, ಎಳ್ದೆ. ನನಗೇನು ಗೊತ್ತು ಹೀಗಾಗುತ್ತೆ ಅಂತ." ಎಂದರು. ವಿಮಾನ ನೆಲದ (ಕಟ್ಟೆಯ) ಮೇಲೆ ಇಳಿದ ನಂತರ ಪೈಲಟ್, "ಮುಖ ತೋರ್ಸ್ದೆ, ನೀರಲ್ಲಿ ಜಂಪ್ ಮಾಡಿ, ಓಡಿ ಹೋದ, ಬಡ್ಡಿಮಗ" ಎಂದು ಪೈಲಟ್ ವಿರುದ್ಧ ಕಿಡಿಕಾರಿದರು.
“I don’t know anything, the machine operator pressed the ignition button when I sat in the cabin. He then asked me to pull a gear lever to operate the equipment,” said Mr Siddaramaiah reacting to the freak mishap.

Labels: ,

"ನನ್ನ ವ್ಯಕ್ತಿತ್ವದ ತೇಜೋವಧೆ" - ರಮ್ಯಸಿ. ನೀಮಾ ಗುರು, ಮಜಾವಾಣಿ ಸಿನೆಮಾ ವಾರ್ತಕಿ

ಪತ್ರಿಕೆಯೊಂದರಎಲ್ಲಿ ಮುದ್ರಣ ದೋಷದಿಂದ "ರಮ್ಯ" ಎಂಬುದು "ರಾಮಯ್ಯ" ಎಂದು ಮುದ್ರಿತವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಚಲನಚಿತ್ರ ತಾರೆ ರಮ್ಯರವರು, ಪತ್ರಿಕೆಯ ಮೇಲೆ ತೇಜೋವಧೆಯ ಆರೋಪ ಹೊರಿಸಿದ್ದಾರೆ. ಈ ಮುದ್ರಣದ ನಂತರ, ತಾವು ಹೋದೆಡೆಯಲ್ಲೆಲ್ಲಾ ತಮ್ಮ ಅಭಿಮಾನಿಗಳು "ರಾಮಯ್ಯ ವಸ್ತಾವಯ್ಯ, ಮೈ ನೆ ದಿಲ್ ತುಜ್ಕೋದಿಯಾ" ಎಂದು ತೆಲುಗು ಮಿಶ್ರಿತ ಹಿಂದಿ ಭಾಷೆಯಲ್ಲಿ ಹಾಡಲು ಪ್ರಾರಂಭಿಸಿರುವುದು ಪ್ಯೂರ್ ಕನ್ನಡ ಗರ್ಲ್‍ ಆದ ತನಗೆ ಮೆಂಟಲ್ anguish ಉಂಟು ಮಾಡಿದೆ ಎಂದು ಹೇಳಿಕೆಯಿತ್ತಿದ್ದಾರೆ.

ನಮ್ಮ ಪತ್ರಿಕೆಯ ವರದಿಗಾರನೊಂದಿಗೆ ಮಾತನಾಡಿದ ರಮ್ಯರವರ ವಕೀಲ ಸೋಮಯ್ಯರವರು, ರಮ್ಯರವರ ತೇಜೋವಧೆ ಮಾಡಿದ ಪ್ರಜಾವಾಣಿ ಪತ್ರಿಕೆ ಮತ್ತು ಅನುಮತಿ ಇಲ್ಲದೆ ಅವರ ಹೆಸರನ್ನು ಬಳಸುತ್ತಿರುವ ರಾಮಯ್ಯ ಎಂಜಿನಿಯರಿಂಗ್ ಕಾಲೇಜು, ಇವೆರಡಕ್ಕೂ ಸದ್ಯದಲ್ಲೇ ನ್ಯಾಯಲಯದಿಂದ ನೋಟೀಸು ಕಳುಹಿಸುವುದಾಗಿ ಹೇಳಿದರು.
[ತಪ್ಪು-ಒಪ್ಪು: ಮುದ್ರಣ ದೋಷದಿಂದ ಮಜಾವಾಣಿ ಪತ್ರಿಕೆಯ ಹೆಸರು ಮಜಾವಾಣಿ ಎಂದಾಗಿದೆ. ರಮ್ಯರವರ ವಕೀಲರ ಹೆಸರು ಸೋಮಯ್ಯ ಅಲ್ಲ; ಸೌಮ್ಯ. ಕ್ಶಮೆ ಇರಲಿ, ಪ್ಲೀಸ್ ಕೇಸ್ ಹಾಕಬೇಡಿ-ಸಂ.]

Labels:

ಕಳ್ಳನ ಬಂಧನ, ಎಲ್ಲೆಡೆ ನೆಮ್ಮದಿಯ ನಿಟ್ಟುಸಿರು


ಜೆ.ಎಂ.ಎಸ್.ಪಾಂಡು, ಮಜಾವಾಣಿ ಕ್ರಿಮಿನಲ್ ವರದಿಗಾರ
ಬೆಂಗಳೂರು, ಏಪ್ರಿಲ್ ೩೧, ೨೦೦೫: ಕೊನೆಗೂ ಎಲ್ಲೆಡೆ ಸಮಾಧಾನದ ನಿಟ್ಟುಸಿರು! ಹಲವಾರು ವರ್ಷಗಳಿಂದ ಕರ್ನಾಟಕದ ಎಲ್ಲೆಡೆ ಅವನ ಹೆಸರು ಹೇಳಿದೊಡನೆಯೇ ಜನರು ಹೆಗಲು ಮುಟ್ಟಿಕೊಳ್ಳುವಂತೆ ಮಾಡಿದ್ದ ಕಳ್ಳನನ್ನು ಪೋಲೀಸರು ಕಡೆಗೂ ಬಂಧಿಸಿದ್ದಾರೆ. ಈ ವಿಷಯವನ್ನು ಪೋಲೀಸ್ ಕಮೀಷನರ್ ಸಾಂಗ್ಲಿಯಾನ ತಮ್ಮ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ಕರ್ನಾಟಕ ಮಾತ್ರವಲ್ಲದೇ, ದೇಶ ವಿದೇಶಗಳಲ್ಲೂ ಅನೇಕ ವರ್ಷಗಳಿಂದ ಅವ್ಯಾಹತವಾಗಿ ನಡೆಯುತ್ತಿದ್ದ ಈ ಅಪರಾಧವನ್ನು ತಡೆಗಟ್ಟಿ ಅಪರಾಧಿಯನ್ನು ಬಂಧಿಸಲು ನಗರ್ತಪೇಟೆ ಪೋಲೀಸ್ ಠಾಣೆಯ ದಫ಼ೇದಾರ್ ದೇರಣ್ಣನವರ ನೇತೃತ್ವದಲ್ಲಿ ಇಂಟರ್‌ಪೋಲ್ ನೆರವಿನೊಂದಿಗೆ ಅಂತರರಾಷ್ಟ್ರೀಯ ತಂಡವೊಂದನ್ನು ರಚಿಸಲಾಗಿತ್ತು. ಅಪರಾಧಿ ತಪ್ಪಿಸಿಕೊಂಡು ಹೋಗುತ್ತಿರುವಾಗ, ದೇರಣ್ಣನವರು ಅತಿ ಸಾಹಸದಿಂದ ಅಪರಾಧಿಯ ವಾಹನವನ್ನು ಅಡ್ಡಗಟ್ಟಿ ವಾಹನದ ಸಮೇತ ಅಪರಾಧಿಯನ್ನು ಹಿಡಿದರೆನ್ನಲಾಗಿದೆ.

ಬೆಳಗೆರೆ ಸಂಶಯ: ಕರ್ನಾಟಕದ ಎಲ್ಲ ಕಡೆಗೂ ತಮ್ಮ ಕ್ರೈಮ್ ಡೇರಿಯ ಮೂಲಕ ಬೆಣ್ಣೆ-ಬಿಸ್ಕತ್ತು ಸರಬರಾಜು ಮಾಡುತ್ತಿರುವ ಕವಿ ಬೆಳಗೆರೆಯವರು, ಪೋಲೀಸರ ಈ ಸಾಧನೆಯ ಬಗೆಗೆ ತಮ್ಮ ಸಂದೇಹ ವ್ಯಕ್ತಪಡಿಸಿದ್ದಾರೆ. ಅಪರಾಧದಲ್ಲಿ ಆಳವಾದ ಅಧ್ಯಯನ ನಡೆಸಿರುವ ಬೆಳಗೆರೆಯವರು, ಈ ವರದಿಗಾರನೊಂದಿಗೆ ಮಾತನಾಡುತ್ತಾ "ಎಷ್ಟೋ ಬಾರಿ ಈ ಅಪರಾಧ ಕೆಂಗೇರಿಯಿಂದ ಹಂಗೇರಿಯವರೆಗೆ ದೂರ್‍ಅದೂರುಗಳಲ್ಲಿ ಒಮ್ಮೆಗೇ ನಡೆದಿದೆ. ಒಬ್ಬನೇ ಕಳ್ಳ ಇವುಗಳನ್ನೆಲ್ಲಾ ಮಾಡಿದ್ದಾನೆಂದರೆ ನಂಬುವುದು ಕಷ್ಟ" ಎಂದರು. ಮುಂದುವರೆಯುತ್ತಾ, "ಕನ್ನಡಿಗರು ಎಚ್ಚರಿಕೆಯಿಂದಿದ್ದು, ಹೆಗಲು ಮುಟ್ಟಿಕೊಳ್ಳುವುದನ್ನು ನಿಲ್ಲಿಸಬಾರದು" ಎಂದು ಉಚಿತ ಸಲಹೆ ನೀಡಿದರು.

Labels:

ಜಯಲಲಿತ ಉಡುಗೆ - ಬುಶ್ ತೊಡುಗೆ
ಮಜಾವಾಣಿ ವಾರ್ತೆ


ಚೆನ್ನೈ, ನವೆಂಬರ್ ೨೦, ೨೦೦೫: ಇಂಗ್ಲೀಷಿನಲ್ಲಿ "Clothes Make the Man" ಎಂಬ ಮಾತಿದೆ. ಆದರೆ, ತಮಿಳು ನಾಡು ಮುಖ್ಯಮಂತ್ರಿ ಕುಮಾರಿ ಜಯಲಲಿತ ವಿಷಯದಲ್ಲಿ "The Woman Made the Clothes" ಎಂಬ ಮಾತು ಸೂಕ್ತವೆನ್ನಿಸುತ್ತದೆ.

ಭ್ರಷ್ಟಾಚಾರ, ಅವ್ಯವಹಾರದ ಆರೋಪಣೆ ಹೊತ್ತಿದ್ದರೂ ಚುನಾವಣೆಗಳಲ್ಲಿ ಗೆದ್ದು ಜನಪ್ರಿಯತೆ ಉಳಿಸಿಕೊಂಡಿರುವ ಜಯಲಲಿತರವರ ಸಾಧನೆ ಜಗತ್ತಿನ ರಾಜಕೀಯ ನಾಯಕರ ಕಣ್ಣಿಗೂ ಬಿದ್ದಿದೆ. ಜಯಲಲಿತರವರ ಜನಪ್ರಿಯತೆಯ ರಹಸ್ಯ ಅವರ ವಿಶಿಷ್ಟ ವೇಶ-ಭೂಷಣವೇ ಎಂದು ತಮ್ಮ ಬೇಹುಗಾರರಿಂದ ಅರಿತ ಅಮೆರಿಕದ ಅಧ್ಯಕ್ಷ ಬುಶ್ ಮತ್ತಿತರ ಜಾಗತಿಕ ರಾಜಕೀಯ ನಾಯಕರು ಜಯಲಲಿತರವರಂತೆಯೇ ಉಡುಗೆಯನ್ನು ತೊಡಲು ನಿರ್ಧರಿಸಿದ್ದಾರೆ. ಇವರ ಜನಪ್ರಿಯತೆ ಹೆಚ್ಚುವುದೋ ಇಲ್ಲವೋ ಕಾದು ನೋಡಬೇಕಾಗಿದೆ.

Labels:

ವಿಶಿಷ್ಟ ಪ್ರತಿಭಟನೆ


ಮಜಾವಾಣಿ ವಿಶೇಷ ವರದಿ
ಬೆಂಗಳೂರು ನವೆಂಬರ್ ೨೧, ೨೦೦೫: ಕರ್ನಾಟಕ ರಕ್ಷಣಾ ವೇದನೆಯ ಕಾರ್ಯಕರ್ತರು ಬೆಳಗಾವಿ ಮೇಯರ್ ಮೋರೆಯವರ ಮುಸುಡಿಗೆ ಮಸಿ ಬಳೆದ ಹಿನ್ನೆಲೆಯಲ್ಲಿಯೇ, ವಾಟಳ್ ಬೆಂಬಲಿಗರು ಬೆಂಗಳೂರಿನಲ್ಲಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ.

ಕೆ.ಆರ್.ವಿ. ಕಾರ್ಯಕರ್ತರು ಮೋರೆಯವರ ವಸ್ತ್ರಹರಣ ಮಾಡಿ ಅವರಿಗೆ ಮಸಿ ಬಳೆದದ್ದು ವಿವಾದಕ್ಕೆಡೆ ಕೊಟ್ಟಿರುವುದನ್ನು ಮನಗಂಡ ವಾಟಾಳ್ ನಾಗರಾಜ್ ಮತ್ತು ಅವರ ಬೆಂಬಲಿಗರು, ನಗರದ ಎಂ.ಜಿ.ರಸ್ತೆಯಲ್ಲಿ ಅರೆ ನಗ್ನನಾಗಿ ಮರಾಠಿಯಲ್ಲಿ ಬುಡುಬುಡುಕೆ ಹೇಳುತ್ತಿದ್ದ ದಾಸಯ್ಯನೊಬ್ಬನಿಗೆ ಮೈ ಎಲ್ಲಾ ಫ಼ೇರ್ ಅಂಡ್ ಲವ್ಲೀ ಮೆತ್ತಿ, ಜುಬ್ಬಾ-ಪಂಚೆ ಉಡಿಸಿ ಕಳುಹಿಸಿದರೆನ್ನಲಾಗಿದೆ.
"ಇಡ್ಲಿ ಹೋರಾಟಗಾರರು"-ಚಂಪಾ ಟೀಕೆ: ವಾಟಳರ ಈ ಪ್ರತಿಭಟನೆಯನ್ನು ಕಟುವಾಗಿ ಟೀಕಿಸಿದ ಚಂದ್ರಶೇಖರ ಪಾಟೀಲರು, ಪ್ರತಿಭಟನೆಕಾರರನ್ನು "ಇಡ್ಲಿ ಹೋರಾಟಗಾರರು" ಎಂದು ಕರೆದಿದ್ದಾರೆ. ದಾಸಯ್ಯನಿಗೆ ಶ್ರ್‍ಈಗಂಧ ಹಚ್ಚದೆ ಫ಼ೇರ್ ಅಂಡ್ ಲವ್ಲೀ ಹಚ್ಚಿರುವುದು ಪಾಟೀಲರ ಮುನಿಸಿಗೆ ಕಾರಣವೆನ್ನಲಾಗಿದೆ. ಅದೂ ಅಲ್ಲದೆ, ವಾಟಾಳರು, ಆತನಿಗೆ ಜುಬ್ಬಾ-ಪಂಚೆ ಉಡಿಸಿದ ನಂತರ ಮೈಸೂರು ಜರಿ-ಪೇಟ ತೊಡಿಸದೇ ಬಿಳೀ ರುಮಾಲು ಸುತ್ತಿ ಬಿಟ್ಟಿರುವುದು ಪಾಟೀಲರ ಮನಸ್ಸಿಗೆ ನೋವುಂಟುಮಾಡಿದೆಯೆಂದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ.

"ಹೆಬ್ಬೆಟ್ಟೊತ್ತುವೆ"- ಬಂಗಾರಪ್ಪಷಡಾಕ್ಷರಿ, ಮಜಾವಾಣಿ ರಾಜಕೀಯ ವರದಿಗಾರ
ಸೊರಬ, ಸೆಪ್ಟೆಂಬರ್ ೫, ೨೦೦೫: ಕರ್ನಾಟಕ ಮಾತ್ರವಲ್ಲ, ಇಡೀ ಭಾರತ ದೇಶದಲ್ಲಿ ಹಲವು ಕೋಟಿ ಜನ ನಿರಕ್ಷರಸ್ಠರಿರುವಾಗ, ಉಳಿದವರು ವಿದ್ಯಾವಂತರಾಗಿ ಮುನ್ನಡೆ ಸಾಧಿಸುತ್ತಿರುವುದು ಅತ್ಯಂತ ದುರದೃಷ್ಟಕರ ಎಂದು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಹೇಳಿದ್ದಾರೆ. ತಮ್ಮ ಹೊಸ ಪಕ್ಷವಾದ ಕನಿಕರ (ಕರ್ನಾಟಕ ನಿರಕ್ಷರಸ್ತರ, ಕಂಗಾಲಾದವರ ರಂಗ) ಪಕ್ಷದ ಉದ್ಘಟನೆಯ ಸಂದರ್ಭದಲ್ಲಿ ಮಾತನಾಡುತ್ತಿದ್ದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯ ವೈಖರಿಯನ್ನು ಕಟುವಾಗಿ ಟೀಕಿಸಿದರು. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ, ಕೆಲವು ವರ್ಷಗಳಲ್ಲಿ ನಿರಕ್ಷರಸ್ತರೇ ಇಲ್ಲವಾಗುವ ಪರಿಸ್ತಿತಿ ಉಂಟಾಗುವ ಸಾಧ್ಯತೆ ಇದೆ ಎಂದರು. ನಿರಕ್ಷರಸ್ತೆಯ ಪರವಾಗಿ ಉಗ್ರ ಹೋರ್‍ಆಟ ನಡೆಸುವು ಭರವಸೆಯಿತ್ತ ಬಂಗಾರಪ್ಪನವರು ಇನ್ನು ಮುಂದೆ ತಾವು ಸಹಿ ಮಾಡುವುದನ್ನು ಬಿಟ್ಟು ಹೆಬ್ಬೆಟ್ಟನ್ನೇ ಒತ್ತುವುದಾಗಿ ಘೋಷಿಸಿದರು.


ವೀರಪ್ಪ ಮೊಯಿಲಿ ಹರ್ಷ: ಬಂಗಾರಪ್ಪನವರ ನಿರ್ಧಾರ ತಮಗೆ ಅತೀವ ಸಂತಸ ತಂದಿದೆಯೆಂದು, ಅತೀವ ಸಂತಸ ತಂದಿದೆಯೆಂದು ಖ್ಯಾತ ಸಾಹಿತಿ ವೀರಪ್ಪ ಮೊಯಿಲಿಯವರು ಮತ್ತೆ ಮತ್ತೆ ಹೇಳಿದ್ದಾರೆ. ಬಂಗಾರಪ್ಪನವರ ಈ ನಿರ್ಧಾರಕ್ಕೆ ತಮ್ಮ ಪೂರ್ಣ ಬೆಂಬಲ ವ್ಯಕ್ತಪಡಿಸಿದ ಮೊಯಿಲಿಯವರು, ತಾವೂ ಸಹ ಬಂಗಾರಪ್ಪನವರ ಹೆಬ್ಬೆಟ್ಟನ್ನೇ ಒತ್ತುವುದಾಗಿ ಹೇಳಿದ್ದಾರೆ. ಅಖಿಲ ಕರ್ನಾಟಕ ಮಾಜಿ ಮುಖ್ಯ ಮಂತ್ರಿಗಳ ಸಂಘದ ಕಛೇರಿಯ ಶಂಖುಸ್ಥಾಪನೆ ಸಮಾರಂಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಮೊಯ್ಲಿಯವರು, ಈ ಸಂಘದ ಸದಸ್ಯತ್ವದ ಸಂಖ್ಯೆಯಲ್ಲಿನ ಕೊರತೆಯನ್ನು ನಿವಾರಿಸಲು ತಾವು ಅಹರ್ನಿಶಿ ದುಡಿಯುವುದಾಗಿ ಭರವಸೆ ಇತ್ತರು.ಬ್ರೇಕಿಂಗ್ ನ್ಯೂಸ್!
ಬಂಗಾರಪ್ಪ ನಿರ್ಧಾರ ಬದಲು?
ವಿಶ್ವೇಶ್ವರ ಬೆಳಗೆರೆ, ಮಜಾವಾಣಿ ರಾಜಕೀಯ ವಿಶ್ಲೇಷಕ
ಇತ್ತೀಚೆಗಷ್ಟೇ ಹೆಬ್ಬೆಟ್ಟನ್ನೆತ್ತಿ ಒತ್ತುವ ನಿರ್ಧಾರ ಮಾಡಿದ್ದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ಮನಸ್ಸು ಬದಲಿಸಿದ್ದಾರೆಯೇ ಎಂಬ ಪ್ರಶ್ನೆ ರಾಜಕೀಯ ವಲಯಗಳಲ್ಲಿ ಎದ್ದಿದೆ. ಬಂಗಾರಪ್ಪನವರ ಹೆಬ್ಬೆಟ್ಟಿಗೆ ಸವಾಲಾಗಿ, ಅವರ ಪುತ್ರ ಕುಮಾರ ಬಂಗಾರಪ್ಪ ತಮ್ಮ ಐದೂ ಬೆರಳನ್ನೂ ಉಪಯೋಗಿಸಲು ನಿರ್ಧರಿಸಿರುವುದು ಈ ಮನಃಪರಿವರ್ತನೆಗೆ ಕಾರಣವಿರಬಹುದೆಂದು ಕನಿಕರ ಪಕ್ಷದ ಒಳವಲಯಗಳಲ್ಲಿ ಕೇಳಿ ಬರುತ್ತಿದೆ.

ದೇಶದಲ್ಲಿ ಅಕ್ಷರತೆ ಹೆಚ್ಚಿದಂತೆ, ಕರ್ನಾಟಕ ನಿರಕ್ಷರಸ್ತ-ಕಂಗಾಲಾದವರ ರಂಗ (ಕನಿಕರ) ಪಕ್ಷದ ಬೆಂಬಲಿಗರ ಸಂಖ್ಯೆಯೂ ಕಡಿಮೆಯಾಗುವುದೆಂಬ ಅರಿವೂ ಪಾದರಸದಂತೆ ತೀಕ್ಷ್ಣವಾದ ರಾಜಕೀಯ ಬುದ್ಧಿಯುಳ್ಳ ಬಂಗಾರಪ್ಪನವರಿಗೆ ತಿಳಿಯದೇ ಏನೂ ಇಲ್ಲ. ಈ ಮಾತಿಗೆ, ಪುಷ್ಟಿ ಕೊಡಲೆಂಬಂತೆ, ಈ ನಡುವೆ ಬಂಗಾರಪ್ಪ ಸಹ ಸಾರ್ವಜನಿಕ ಸಭೆಗಳಲ್ಲಿ ತಮ್ಮ ಎರಡು ಬೆರಳುಗಳನ್ನು ತೋರುತ್ತಿದ್ದಾರೆ.

Labels:

ಬಲೂನುಗಳಿಂದ ವಾಯು ಕೊರತೆ?
ಮಜಾವಾಣಿ ವಿಶೇಷ ವೈಜ್ನಾನಿಕ ವರದಿ
ಹಿಂದೆ ಭಾರತದಲ್ಲಿ ಮಕ್ಕಳ "ಬರ್ತ್ ಡೇ" ಮಾಡುತ್ತಿರಲಿಲ್ಲ. ಬದಲಿಗೆ ಜನ್ಮ-ದಿನ ಆಚರಿಸುತ್ತಿದ್ದರು. ಬಲೂನು-ಕೇಕ್‍-ಕ್ಯಾಂಡಲ್‍ಗಳ ಅವಾಂತರವಿರಲಿಲ್ಲ; ದೇವರ ದೀಪ, ತಂಬಿಟ್ಟು, ಹೋಳಿಗೆಯ ಸಂಭ್ರಮವಿತ್ತು. ಕೊಂಚ ಆಧುನಿಕರೆನ್ನಿಸಿ ಕೊಂಡವರು, ಹೋಳಿಗೆ ಬದಲಿಗೆ ಎಂ.ಟಿ.ಆರ್. ಮಿಕ್ಸ್‍ನಿಂದಲೋ, ಆರ್.ಕೆ. ಮಿಕ್ಸ್‍ನಿಂದಲೋ ಜಾಮೂನು ಮಾಡಿ ತಿಂದು ಸಂತಸ ಪಡುತ್ತಿದ್ದರು.

ಈಗ ಕಾಲ ಬದಲಾಗಿದೆ. ಎಲ್ಲೆಲ್ಲೂ "ಬರ್ತ್ ಡೇ"ಗಳೇ. ಕೇಕ್ ಏನು, ಕ್ಯಾಂಡಲ್ ಏನು ಎಲ್ಲಕ್ಕಿಂತ ಮುಖ್ಯವಾಗಿ ಡೆಕೋರೇಷನ್‍ಗೆ ಉಪಯೋಗಿಸುವ ಬಲೂನ್‍ಗಳೇನು!

ಎಲ್ಲ ಮಜದ ಹಿಂದೆ ಸಜ ಆಡಗಿರುತ್ತದೆ ಎಂಬುದು ತಿಳಿದವರು ಹೇಳುವ ಮಾತು. ಹಲವು ವಾರಗಳ ತನಿಖೆ-ಸಂಶೋಧನೆಯ ನಂತರ, ಮಜಾವಾಣಿಯ ವೈಜ್ನಾನಿಕ ತನಿಖಾವರದಿಗಾರರು ಬಲೂನುಗಳಿಂದ ಪರಿಸರಕ್ಕೆ ಆಗುತ್ತಿರುವ ಅಪಾಯವನ್ನು ಬಯಲಿಗೆಳೆದಿದ್ದಾರೆ. ದುರದೃಷ್ಟದ ಮಾತೆಂದರೆ, ಈ ಅಪಾಯದ ಕುರಿತು ಸರ್ಕಾರವಾಗಲೀ, ಪಾಟಿಯಾಲದ ಗ್ಯಾನಿ ಜೈಲ್ ಸಿಂಗ್ ವಿಶ್ವವಿದ್ಯಾಲಯದ ತಜ್ನರ ಹೊರತು ಉಳಿದ ವಿಜ್ನಾನಿಗಳಾಗಲೀ ಯಾವುದೇ ಕಾಳಜಿ ತೋರಿಸಿಲ್ಲ.

ಈ ಅಪಾಯ ಅರ್ಥಮಾಡಿಕೊಳ್ಳಲು ಕಷ್ಟವಾದದ್ದೇನೂ ಅಲ್ಲ. ನಾವು ಬಲೂನುಗಳಲ್ಲಿ ಗಾಳಿ ತುಂಬಿದಂತೆ ಪರಿಸರದಲ್ಲಿನ ಗಾಳಿ ಕಡಿಮೆಯಾಗುತ್ತದೆ. ಹೆಚ್ಚು-ಹೆಚ್ಚು ಬಲೂನುಗಳಲ್ಲಿ ಗಾಳಿ ತುಂಬಿದಂತೆ ವಾಯು ಕೊರತೆಯೂ ಹೆಚ್ಚಾಗುವುದರಲ್ಲಿ ಅನುಮಾನವೇ ಇಲ್ಲ. ಆದರೂ, ಈ ವಿಷಯದ ಕುರಿತು ತಜ್ನರಿಂದ ಅಭಿಪ್ರಾಯಪಡೆಯಲು ನಮ್ಮ ಪತ್ರಿಕೆಯ ವರದಿಗಾರರು ಯತ್ನಿಸಿದಾಗ ಬೆಂಗಳೂರಿನ ಭಾರತ ವಿಜ್ನಾನ ಕೇಂದ್ರದ (ಐ.ಐ.ಎಸ್.ಸಿ.) ವಿಜ್ನಾನಿಗಳಿಂದ ದೊರಕಿದ್ದು ಪೂರ್ಣ ನಿರಾಸಕ್ತಿ.

ಆದರೆ, ಪಾಟಿಯಾಲಾದ ಗ್ಯಾನಿ ಜೈಲ್ ಸಿಂಗ್ ವಿಶ್ವವಿದ್ಯಾಲಯದ ವಾಯುಶಾಸ್ತ್ರಜ್ನ ಡಾ.ಅನಿಲ್ ಸಿಂಗ್‍ರವರು ನಮ್ಮೆಲ್ಲಾ ಪ್ರಶ್ನೆಗಳನ್ನು ಉತ್ತರಿಸಿ, ನಮ್ಮ ಅನುಮಾನವನ್ನು ಖಚಿತ ಪಡಿಸಿದರು. ಈ ವಿಷಯದ ಕುರಿತು ಆಳವಾದ ಅಧ್ಯಯನ ನಡೆಸಿರುವ ಅವರು, "ಭಾರತ ದೇಶವೊಂದರಲ್ಲಿಯೇ ಸುಮಾರು ೨೫ ಕೋಟಿಗೂ ಹೆಚ್ಚಿನ ಮಕ್ಕಳು ಇದ್ದಾರೆ. ತಲಾ ಎರಡು ಬಲೂನು ಎಂದರೂ, ಪ್ರತಿ ಬಲೂನಿನಲ್ಲಿ ೧ ಲೀಟರ್ ಗಾಳಿ ಹಿಡಿದರೆ ೫೦ ಕೋಟಿ ಲೀಟರ್ ವಾಯುವನ್ನು ಬಲೂನುಗಳಲ್ಲಿ ಹಿಡಿದಿಡಿಯಲಾಗುತ್ತಿದೆ" ಎಂದು ಈ ಅಪಾಯದ ಬಗೆಗೆ ಅಂಕೆ-ಸಂಖ್ಯೆಗಳನ್ನು ಒದಗಿಸಿದರು. ಅಷ್ಟೇ ಅಲ್ಲ, ಕಾರು, ಮೋಟಾರು ಸೈಕಲ್ಲುಗಳು ಹೆಚ್ಚುತ್ತಿರುವುದರಿಂದ ಅವುಗಳ ಟೈರ್‍‍ಗಳಲ್ಲಿ ಹಿಡಿದಿಡುತ್ತಿರುವ ವಾಯುವಿನ ಬಗೆಗೂ ಅಧ್ಯಯನ ನಡೆಸುವ ಅವಶ್ಯಕತೆಯಿದೆ ಎಂದರು.

ಆಳವಾದ ಅಧ್ಯಯನ ಮಾಡಿ, ಇಷ್ಟೆಲ್ಲಾ ಅಂಕಿ-ಆಂಶಗಳನ್ನು ಸಂಗ್ರಹಿಸಿದ್ದರೂ ಡಾ.ಅನಿಲ್ ಸಿಂಗ್‍ರವರಿಗೆ ಸಿಕ್ಕಿರುವುದು ಅಸಡ್ಡೆ, ಮರುಕ ಮತ್ತು ಕೆಲವೊಮ್ಮೆ ಅಪಹಾಸ್ಯ. ಇತ್ತೀಚೆಗೆ ಸಮಾರಂಭವೊಂದರಲ್ಲಿ ರಾಷ್ಟ್ರಪತಿ ಕಲಂರವರಿಗೆ ತಮ್ಮ ವಾಯು-ಕೊರತೆಯ ಅಧ್ಯಯನದ ಕುರಿತು ಕಿರುಚಿದಾಗ, "ನನ್ನಂತಹೇ ವಿಜ್ನಾನಿಯಾದ ಕಲಂ ನನ್ನ ಅಧ್ಯಯನವನ್ನು ಜೋಕ್ ಎಂದು ಭಾವಿಸಿದರು" ಎಂದು ಡಾ.ಸಿಂಗ್‍ರವರು ನೋವಿನಿಂದ ನುಡಿದರು.

ಈ ಅಪಾಯದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ನಮ್ಮ ವರದಿಗಾರರು ಇತ್ತೀಚೆಗೆ ತಾನೆ ಹಿಮಾಲಯ ಪರ್ವತಾರೋಹಣ ಮಾಡಿ ಬಂದಿರುವವರೊಬ್ಬರನ್ನು ಸಂದರ್ಶಿಸಿದಾಗ, ವಾಯು-ಕೊರತೆಯ ಅಪಾಯ ಈಗಾಗಲೇ ಹಿಮಾಲಯದ ಎತ್ತರದ ಶಿಖರಗಳಲ್ಲಿ ನಿಜವಾಗಿರುವ ಸಂಗತಿ ತಿಳಿದುಬಂತು.

ಆತಂಕದ ಸಂಗತಿಯೆಂದರೆ, ನಮ್ಮ ರಾಜಕಾರಣಿಗಳ, ವಿಜ್ನಾನಿಗಳ ಅಸಡ್ಡೆ ಹೀಗೆಯೇ ಮುಂದುವರೆದರೆ, ಇಂದು ಹಿಮಾಲಯದ ಶಿಖರಗಳ ಉತ್ತುಂಗದಲ್ಲಿ ಕಾಡುತ್ತಿರುವ ವಾಯು ಕೊರತೆ, ಮುಂದೊಂದು ದಿನ ಕನ್ಯಾಕುಮಾರಿಯ ಕಡಲ ಅಡಿಯಲ್ಲಿ ಕಂಡು ಬಂದರೆ ಆಶ್ಚರ್ಯವೇನೂ ಇಲ್ಲ.