ಮಜಾವಾಣಿ

ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು...

Wednesday, November 23, 2005

"ಅಕ್ರಮ ಬಳಕೆ, ದುರುಪಯೋಗ" - ಭಾರಿ ಪ್ರತಿಭಟನೆ


ಬೆಂಗಳೂರು ನವೆಂಬರ್, ೨೩, ೨೦೦೫:
ಇರಾಕ್ ಯುದ್ಧದ ವಿಚಾರವಾಗಿ ಅಮೆರಿಕ ಸರ್ಕಾರ ಅದರಲ್ಲೂ ಅಧ್ಯಕ್ಷ ಬುಶ್ ವಿರುದ್ಧದ ಪ್ರತಿಭಟನೆ ಸರ್ವವ್ಯಾಪಿಯಾಗಿರುವುದು ಎಲ್ಲರಿಗೂ ತಿಳಿದ ವಿಚಾರವೇ. ಅಬು-ಗ್ರೇಬ್ ಖೈದಿಗಳ ಹಿಂಸಾಚಾರದ ವಿಷಯ ಹೊರ ಬಂದ ನಂತರವಂತೂ ಈ ಪ್ರತಿಭಟನೆಗಳು ತಾರಕಕ್ಕೇರಿವೆ.

ಊರಿಗೆ ಬಂದವಳು ನೀರಿಗೆ ಬರದಿರುತ್ತಾಳೆಯೇ ಎಂಬಂತೆ, ಬುಶ್ ವಿರುದ್ಧದ ಆಕ್ರೋಶ ಈಗ ಕನ್ನಡ ಚಿತ್ರೋದ್ಯಮವನ್ನೂ ಮುಟ್ಟಿದೆ. ಬುಶ್ ಆಡಳಿತದ ಹಿಂಸಾ-ವಿಧಾನಗಳನ್ನು ಪ್ರತಿಭಟಿಸಿ ಕನ್ನಡ ಚಲನ ಚಿತ್ರ ತಾರೆಯರು, ನಿರ್ಮಾಪಕರು, ನಿರ್ದೇಶಕರು ನಿನ್ನೆ ಗಾಂಧಿನಗರದಲ್ಲಿ ಭಾರಿ ಪ್ರತಿಭಟನೆಯನ್ನೇರ್ಪಡಿಸಿದ್ದರು.

ಯುದ್ಧ ಖೈದಿಗಳಿಗೆ ಕನ್ನಡ ಚಲನಚಿತ್ರಗಳನ್ನು ತೋರಿಸುವ ಬುಶ್ ಆಡಳಿತದ ಕಾರ್ಯನೀತಿಯನ್ನು ಕಟುವಾಗಿ ಟೀಕಿಸಿದ ನಿರ್ಮಾಪಕ-ನಿರ್ದೇಶಕ ಇಂದ್ರಜಿತ್ ಲಂಕೇಶ್‍ರವರು ತಮ್ಮ ಚಿತ್ರ ಪ್ರೇಕ್ಷಕರ ಮನರಂಜನೆಯ ಉದ್ದೇಶದಿಂದ ನಿರ್ಮಿಸಿದ್ದೆಂದೂ, ಅದನ್ನು ಚಿತ್ರಹಿಂಸೆಗಾಗಿ ಬಳಸುವ ಅಮೆರಿಕದ ತಂತ್ರವನ್ನು "ಅಕ್ರಮ ಬಳಕೆ ಮತ್ತು ದುರುಪಯೋಗ" ಎಂದು ಕರೆದರು.
ಆದರೆ ನಿರ್ಲಿಪ್ತ ವಿಶ್ಲೇಷಕರ ಪ್ರಕಾರ ಕನ್ನಡ ಚಿತ್ರರಂಗದ ಈ ವಾದವನ್ನು ಒಪ್ಪುವುದು ಕಷ್ಟ. ಇದೇ ಚಿತ್ರೋದ್ಯಮ ಕೆಲವೇ ತಿಂಗಳ ಹಿಂದೆ ಮನರಂಜನೆ ತೆರಿಗೆಯ ವಿರುದ್ಧ ಚಳುವಳಿ ನಡೆಸಿದಾಗ, ಮನರಂಜನೆಯೇ ಇಲ್ಲದ ಈ ಚಿತ್ರಗಳ ಮೇಲೆ "ಮನರಂಜನೆ ತೆರಿಗೆ" ಏರಿಸುವ ಸರ್ಕಾರದ ಕ್ರಮ ಸರಿಯಲ್ಲವೆಂಬ ಕಾರಣದಿಂದ ಇಡೀ ಕನ್ನಡ ಜನತೆ ಚಿತ್ರೋದ್ಯಮದ ಬೆಂಬಲಕ್ಕೆ ನಿಂತಿತ್ತು. ಆದರೆ, ಈಗ ತಮ್ಮ ಚಿತ್ರಗಳು ಮನರಂಜನೆಗಾಗಿ ನಿರ್ಮಿಸಿರುವುದೆನ್ನುವ ಚಿತ್ರೋದ್ಯಮದ ಮಾತನ್ನು ಒಪ್ಪುವುದಾದರೂ ಹೇಗೆ ಎಂಬ ಪ್ರಶ್ನೆ ಎದ್ದಿದೆ.

ಮುಂಬೈ: ಬಾಲಿವುಡ್ ಬೆಂಬಲ :
ಕನ್ನಡ ಚಿತ್ರೋದ್ಯಮದ ಪ್ರತಿಭಟನೆಗೆ ತಮ್ಮ ಸಂಪೂರ್ಣ ಬೆಂಬಲವಿರುವುದಾಗಿ ಬಾಲಿವುಡ್ ನಿರ್ಮಾಪಕ ನಿರ್ದೇಶಕರ ಸಂಘ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಭಾರತೀಯ ಚಲನಚಿತ್ರಗಳನ್ನು "ಚಿತ್ರಹಿಂಸೆ"ಗಾಗಿ ಅಕ್ರಮ ಉಪಯೋಗ ಮಾಡುವ ಬುಶ್ ಆಡಳಿತದ ನಿರ್ಧಾರ ಹೀಗೆಯೇ ಮುಂದುವರೆದಲ್ಲಿ, ಹಾಲಿವುಡ್ ಚಿತ್ರಗಳನ್ನು ಅನಾಮತ್ತಾಗಿ ಎತ್ತಿ ಪರವಾನಗಿ ಇಲ್ಲದೆ ನಕಲು ಮಾಡುವ ಪ್ರವೃತ್ತಿಯನ್ನು ಕೈ ಬಿಡುವುದಾಗಿ ಸಂಘ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ.

Labels:

Saturday, November 19, 2005

"ತುಂಬಲಾಗದ ನಷ್ಟ" - ಯು.ಆರ್.ಎ. ಕಂಬನಿಮಜಾವಾಣಿ ಹರಿಶ್ಚಂದ್ರ ಘಾಟ್ ಬ್ಯೂರೋ ವರದಿ
ವಿಲಿಯಂ ಶೇಕ್ಸ್‍ಪಿಯರ್ ಮರಣಕ್ಕೆ ತಮ್ಮ ಖೇದವನ್ನು ವ್ಯಕ್ತಪಡಿಸಿದ ಜ್ನಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಯು.ಆರ್.ಅನಂತ ಮೂರ್ತಿಯವರು, ಆತನ ಮರಣದಿಂದ ಕನ್ನಡಕ್ಕೆ ಅನುವಾದಿತ ಸಾಹಿತ್ಯಕ್ಕೆ ಮಾತ್ರ ಅಲ್ಲ, ಇಡೀ ಜಾಗತಿಕ ಸಾಹಿತ್ಯರಂಗಕ್ಕೇ ತುಂಬಲಾರದ ನಷ್ಟವಾಗಿದೆಯೆಂದರು.

ತಮಗೂ ಶೇಕ್ಸ್‍ಪಿಯರ್‍ಗೂ ತಾತ್ವಿಕ ಭಿನ್ನಾಭಿಪ್ರಾಯಗಳಿವೆಯೆಂಬುದನ್ನು ಅಲ್ಲಗೆಳೆದ ಅನಂತಮೂರ್ತಿಯವರು, ವಿಷಾದ ವ್ಯಕ್ತಪಡಿಸಲು ತಡವಾಗಿದ್ದಕ್ಕೆ ಆ ಮಹಾನ್ ಸಾಹಿತಿಯ ನಿಧನವಾದಾಗ ತಾವು ಯೂರೋಪಿನಲ್ಲಿ ಇರದಿದ್ದುದೇ ಕಾರಣವೆಂದು ಸ್ಪಷ್ಟಪಡಿಸಿದರು.

"ಪಿಜ್ಜಾ ಸಾಹಿತಿ" ಚಂಪಾ ಟೀಕೆ: ಅನಂತಮೂರ್ತಿಯವರ ಕಂಬನಿಯನ್ನು ಕಟುವಾಗಿ ಟೀಕಿಸಿದ ಖ್ಯಾತ ಸಾಹಿತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪಾಟೀಲರು, ಕನ್ನಾಡದ ಮಹಾನ್ ಸಾಹಿತಿ ಮುದ್ದಣ, ಕುಮಾರವ್ಯಾಸ ಮುಂತಾದವರು ನಿಧನರಾದಾಗ "ಈ ಪಿಜ್ಜಾ ಸಾಹಿತಿ ಎಲ್ಲಿದ್ದರು?" ಎಂದು ಪ್ರಶ್ನಿಸಿದ್ದಾರೆ.

Labels: ,